Thursday, 19th September 2024

Manipur Violence: ಮಣಿಪುರ ಹಿಂಸಾಚಾರ; ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿರೇನ್ ಸಿಂಗ್

Manipur Violence

ಇಂಫಾಲ: ಈಶಾನ್ಯ ರಾಜ್ಯ ಮಣಿಪುರ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ನಲುಗಿದೆ. ಕುಕಿ ಮತ್ತು ಮೈಟಿ ಸಮುದಾಯಗಳ ನಡುವೆ ಹೊಸದಾಗಿ ಭುಗಿಲೆದ್ದ ಹಿಂಸಾಚಾರಕ್ಕೆ ಕನಿಷ್ಠ6 ಮಂದಿ ಮೃತಪಟ್ಟಿದ್ದಾರೆ (Manipur Violence). ಈ ಮಧ್ಯೆ ಗಲಭೆ ಪೀಡಿತ ಪ್ರದೇಶಗಳಲ್ಲಿ ಸೇನಾ ಹೆಲಿಕಾಪ್ಟರ್‌ ಮೂಲಕ ಕಣ್ಗಾವಲಿಡಲು ಸರ್ಕಾರ ನಿರ್ಧರಿಸಿದೆ. ಕುಕಿ ಸುಮುದಾಯಕ್ಕೆ ಇರುವ ವಿಶೇಷ ಆರ್ಥಿಕ ಪ್ರಯೋಜನಗಳು ಮತ್ತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಳನ್ನು ಮೈಟಿ ಸಮುದಾಯಕ್ಕೂ ವಿಸ್ತರಿಸುವಂತೆ ನ್ಯಾಯಾಲಯವು ಆದೇಶಿಸಿದ ನಂತರ ಈ ಎರಡು ಸಮುದಾಯಗಳ ನಡುವೆ ಆಗಾಗ ಘರ್ಷಣೆ ನಡೆಯುತ್ತಲೇ ಇದೆ. ಕಳೆದ ವರ್ಷ ಆರಂಭವಾದ ಗಲಭೆಯಲ್ಲಿ ಇದುವರೆಗೆ ಕನಿಷ್ಠ 225 ಮಂದಿ ಮೃತಪಟ್ಟಿದ್ದು, 60 ಸಾವಿಕಕ್ಕೂ ಅಧಿಕ ಮಂದಿ ವಲಸೆ ಹೋಗಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ಸಿಎಂ

ಸದ್ಯ ಕಂಡುಬಂದಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮುಂದಾಗಿದ್ದು, ರಾಜ್ಯಪಾಲ ಎಲ್. ಆಚಾರ್ಯ ಅವರನ್ನು ಭೇಟಿಯಾಗಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ವಿವರಿಸಿದ್ದಾರೆ.

ನಾಗರಿಕರ ಮೇಲೆ ಇತ್ತೀಚಿಗೆ ಡ್ರೋನ್ ಮತ್ತು ರಾಕೆಟ್ ದಾಳಿ ನಡೆಯುತ್ತಿರುವ ಹಿನ್ನಲೆಯಲ್ಲಿ ಮಣಿಪುರ ಪೊಲೀಸರು ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸಿದ್ದಾರೆ. ಭದ್ರತಾ ಪಡೆಗಳು ಶನಿವಾರ ಡ್ರೋನ್ ವಿರೋಧಿ ವ್ಯವಸ್ಥೆಯ ಪ್ರಾತ್ಯಕ್ಷಿಕೆಯನ್ನು ಸಹ ನೀಡಿವೆ. ಕಣಿವೆ ಜಿಲ್ಲೆ ಇಂಫಾಲದ ಬೆಟ್ಟಗಳಿಂದ ಶಂಕಿತ ಕುಕಿ ದಂಗೆಕೋರರು ನಡೆಸಿದ ಶಸ್ತ್ರಸಜ್ಜಿತ ಡ್ರೋನ್ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಕೆಲವು ದಿನಗಳ ನಂತರ ಈ ಬೆಳವಣಿಗೆ ಕಂಡುಬಂದಿದೆ.

ಪೊಲೀಸ್ ಇನ್ಸ್‌ಪೆಕ್ಟರ್‌ ಜನರಲ್ ಕೆ.ಕಬೀಬ್ ಮಾತನಾಡಿ, ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ ಮತ್ತು ನಾಗರಿಕರ ಮೇಲಿನ ದಾಳಿಯನ್ನು ಎದುರಿಸಲು ಪೊಲೀಸರು ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. “ರಾಜ್ಯ ಪಡೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆʼʼ ಎಮದು ಮಾಹಿತಿ ನೀಡಿದ್ದಾರೆ.

ಸೇನಾ ಹೆಲಿಕಾಪ್ಟರ್‌ಗಳು ವೈಮಾನಿಕ ಗಸ್ತು ನಡೆಸುತ್ತಿವೆ ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಈತನ್ಮಧ್ಯೆ ಪೊಲೀಸರು ಬೆಟ್ಟಗಳು ಮತ್ತು ಕಣಿವೆಯ ಎರಡೂ ಬದಿಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ದೂರಗಾಮಿ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದ ಪ್ರದೇಶಗಳನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸಲಾಗಿದೆ.

ಈ ಸುದ್ದಿಯನ್ನೂ ಓದಿ: Missing Boys: ಮಿಸ್ಸಿಂಗ್‌ ಹುಡುಗರ ಪತ್ತೆಗೆ ನೆರವಾಯ್ತು 500 ಸಿಸಿಟಿವಿ ಕ್ಯಾಮೆರಾ, ಏಳು ಪೊಲೀಸರ ತಂಡ

ಕಳೆದ ವರ್ಷ ಮೇ 3ರಿಂದ ಕುಕಿ ಮತ್ತು ಮೈಟಿ ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿದೆ. ಶಾಂತವಾಗಿದ್ದ ಪರಿಸ್ಥಿತಿ ಕೆಲವು ದಿನಗಳಿಂದ ಮತ್ತೆ ಉದ್ವಿಗ್ನವಾಗಿದ್ದು, ಉಗ್ರಗಾಮಿಗಳು ಡ್ರೋನ್‌ಗಳು ಮತ್ತು ರಾಕೆಟ್‌ಗಳಂತಹ ಹೊಸ ತಂತ್ರಜ್ಞಾನ ಬಳಸುತ್ತಿದ್ದಾರೆ. ರೈಫಲ್‌ಗಳು ಮತ್ತು ಗ್ರೆನೇಡ್‌ಗಳ ಬಳಕೆ ಅಡೆತಡೆಯಿಲ್ಲದೆ ಮುಂದುವರಿದಿದೆ. ಶುಕ್ರವಾರ (ಸೆ. 6) ಅಪ್ಪಳಿಸಿದ್ದ ರಾಕೆಟ್‌ ಸುಮಾರು 4 ಅಡಿ ಉದ್ದವಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಂಜಮ್ ಚಿರಾಂಗ್ ಗ್ರಾಮದಲ್ಲಿ ನಡೆದ ಡ್ರೋನ್ ದಾಳಿಯಿಂದ ಮೂವರು ಗಾಯಗೊಂಡಿದ್ದರು.