ಇಂಫಾಲ್: ಇತ್ತೀಚೆಗೆ ಮಣಿಪುರದ ಜಿರಿಬಾಮ್‌ನಿಂದ (Manipur Violence) ನಾಪತ್ತೆಯಾಗಿದ್ದ ಮತ್ತಿರ್ವರ ಮೃತದೇಹ ಭಾನುವಾರ ದೊರೆತಿದೆ. ನಾಪತ್ತೆಯಾಗಿದ್ದ 6 ಮಂದಿ ಪೈಕಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ 16 ಕಿಮೀ ದೂರದ ನದಿಯಲ್ಲಿ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಭಾನುವಾರ ಬೆಳಗ್ಗೆ ರುಂಡವಿಲ್ಲದ ಮತ್ತೊಂದು ಮಹಿಳೆಯ ಮೃತದೇಹ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ, ಜೊತೆಗೆ ಉಗ್ರರು ಒತ್ತೆಯಾಳಾಗಿ ಇರಿಸಿದ್ದರು ಎನ್ನಲಾದ 2 ವರ್ಷದ ಮಗುವಿನ ದೇಹವೂ ಪತ್ತೆಯಾಗಿದೆ.
ಜಿರಿಬಾಮ್ ಜಿಲ್ಲೆಯ ಗಡಿಯಲ್ಲಿರುವ ಬರಾಕ್ ನದಿಯಲ್ಲಿ ತೇಲಿಬರುತ್ತಿದ್ದ ಮೃತದೇಹವನ್ನು ಅಸ್ಸಾಂನ ಕ್ಯಾಚರ್ ಜಿಲ್ಲೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಆದ್ರೆ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಒಟ್ಟಿನಲ್ಲಿ ನಾಪತ್ತೆಯಾದ 6 ಮಂದಿಯಲ್ಲಿ ಇವರೂ ಒಬ್ಬರೆಂದು ಶಂಕಿಸಲಾಗಿದೆ. 4ನೇ ಮೃತದೇಹ ಪತ್ತೆಯಾದ ಬೆನ್ನಲ್ಲೇ ಮಣಿಪುರದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ.
ಮಣಿಪುರ ಹಿಂಸಾಚಾರ ರಾಜಕೀಯ ಮೇಲೂ ಪ್ರಭಾವ
ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ. ಅದರ ಪರಿಣಾಮ ಈಗ ಅಲ್ಲಿನ ರಾಜಕೀಯದ ಮೇಲೂ ಕಾಣುತ್ತಿದೆ. ಇದೀಗ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ಮುಂದೆ ಹೊಸ ಸವಾಲು ಬಂದಿದೆ. ಮಿತ್ರಪಕ್ಷ ನ್ಯಾಶನಲ್ ಪೀಪಲ್ಸ್ ಪಾರ್ಟಿ (NPP) ಮಣಿಪುರ ಸರ್ಕಾರದಿಂದ ಬೆಂಬಲವನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಎನ್‌ಪಿಪಿ ಮುಖ್ಯಸ್ಥ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆಯುವ ಮೂಲಕ ಬೆಂಬಲ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ಅಮಿತ್ ಶಾ ತುರ್ತು ಸಭೆ
ದಿನೇ ದಿನೆ ಮಣಿಪುರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಹಿರಿಯ ಭದ್ರತಾ ಸಂಸ್ಥೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಶಾಂತಿ ಕದಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು. ರಾಜ್ಯದಲ್ಲಿ ಕುಕಿ (Kuki) ಮತ್ತು ಮೈತೆಯಿ ಗುಂಪುಗಳ ನಡುವೆ ನಡೆಯುತ್ತಿರುವ ಘರ್ಷಣೆಯನ್ನು ತಡೆಯಲು ಕೇಂದ್ರ ಪ್ರಯತ್ನಿಸುತ್ತಿದ್ದು, ಗೃಹ ಸಚಿವರು ನಡೆಸಿದ ಸಭೆಯಲ್ಲಿ ಕಲಹ ಪೀಡಿತ ಪ್ರದೇಶದಲ್ಲಿ ಶಾಂತಿ ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ
ಈಗಾಗಲೇ ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ (CRPF director general Anish Dayal Singh) ಅವರನ್ನು ಮಣಿಪುರಕ್ಕೆ ನಿಯೋಜಿಸಲಾಗಿದೆ. ಸೋಮವಾರದ ಅಮಿತ್ ಶಾ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಮಣಿಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಪಡೆಗಳ ಮುಖ್ಯಸ್ಥರು, ಗೃಹ ಸಚಿವಾಲಯ ಮತ್ತು ಇಂಟೆಲಿಜೆನ್ಸ್ ಬ್ಯೂರೋದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಏನು?
ಮಣಿಪುರದಲ್ಲಿ ಕುಕಿ ಬಂಡುಕೋರರು ಹಾಗೂ ಮೈತೆಯಿ ಸಮುದಾಯಗಳ ನಡುವೆ ಕೆಲ ತಿಂಗಳಿನಿಂದ ಘರ್ಷಣೆ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ನೂರಾರು ಜನರು ಬಲಿಯಾಗಿದ್ದಾರೆ. ಇತ್ತೀಚೆಗೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 11 ಕುಕಿ ಬಂಡುಕೋರರನ್ನು ಹತ್ಯೆ ಮಾಡಿತ್ತು. ಅದರ ಪ್ರತಿಕಾರವಾಗಿ ಬಂಡುಕೋರರು ಮೈತೆಯಿ ಸಮಾಜದ ಆರು ಜನರನ್ನು ಅಪಹರಣ ಮಾಡಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಮಣಿಪುರದ ಜಿರಿಬಾಮ್‌ನಿಂದ ನಾಪತ್ತೆಯಾಗಿದ್ದ 6 ಮಂದಿ ಶವವಾಗಿ ಪತ್ತೆಯಾಗಿದ್ದಾರೆ . ಜಿರಿಬಾಮ್ ಜಿಲ್ಲೆಯ ಹೆರೋಜಿತ್ ಹಾಗೂ ಆತನ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ಅವರ ಎರಡು ವರ್ಷದ ಮಗನ್ನು ಕೊಲ್ಲಲಾಗಿದ್ದು, ಆತನ ರುಂಡ ಕತ್ತರಿಸಲಾಗಿದೆ. ಆತನ 65 ವರ್ಷದ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. ಈ ಶವಗಳು ಸಿಕ್ಕ ಬಳಿಕ ಹೀರೋಜಿತ್ ಪತ್ನಿ, ಅತ್ತೆ, ಪತ್ನಿಯ ಸಹೋದರಿ ಮತ್ತು ಆಕೆಯ ಮಗನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಅಮಾಯಕರನ್ನು ಹತ್ಯೆಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮೈತೆಯಿ ಸಮುದಾಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಉದ್ರಿಕ್ತ ಗುಂಪೊಂದು ಶನಿವಾರ ಶಾಸಕರು ಮತ್ತು ಸಚಿವರ ಮನೆಗಳಿಗೆ ಮುತ್ತಿಗೆ ಹಾಕಿ, ಬೆಂಕಿ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಿದ್ದರು. ಶನಿವಾರ ನಡೆಸಿದ ಹಿಂಸಾಚಾರದ ಸಂಬಂಧ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:Jiribam Encounter: ಮಣಿಪುರದಲ್ಲಿ ಮತ್ತೆ ಸಂಘರ್ಷ: ಭೀಕರ ಎನ್‌ಕೌಂಟರ್‌ನಲ್ಲಿ 11 ಬಂಡುಕೋರರ ಹತ್ಯೆ