Monday, 18th November 2024

Manipur Violence: ಸಂಘರ್ಷ ಪೀಡಿತ ಮಣಿಪುರದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಹೆಚ್ಚುವರಿ 50 ತುಕಡಿ ನಿಯೋಜನೆ

Manipur Violence

ಇಂಫಾಲ: ಸಂಘರ್ಷ ಪೀಡಿತ ಮಣಿಪುರ (Manipur Violence)ದಲ್ಲಿ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಹೆಚ್ಚುವರಿ 50 ತುಕಡಿಗಳನ್ನು ನಿಯೋಜಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಿರಿಬಾಮ್ ಜಿಲ್ಲೆಯಲ್ಲಿ ಪ್ರಸ್ತುತ ಪರಿಸ್ಥಿತಿ ಹದಗೆಟ್ಟಿದ್ದು, ಈ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ (ನ. 18) ಸತತ 2ನೇ ದಿನ ಉನ್ನತ ಮಟ್ಟದ ಸಭೆ ನಡೆಸಿದರು. ಭಾನುವಾರವೂ ಅವರು ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು.

5,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ಸಿಆರ್‌ಪಿಎಫ್‌ ಮತ್ತು ಬಿಎಸ್ಎಫ್‌ನ ಹೆಚ್ಚುವರಿ 50 ತುಕಡಿಗಳನ್ನು ಮಣಿಪುರಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ. ಈ ಪೈಕಿ 35 ತುಕುಡಿ ಸಿಆರ್‌ಪಿಎಫ್‌ದ್ದಾದರೆ ಉಳಿದ 15 ಯೂನಿಟ್‌ ಬಿಎಸ್‌ಎಫ್‌ಗೆ ಸೇರಿದ್ದಾಗಿದೆ. ನ. 12ರಂದು ಗೃಹ ಸಚಿವಾಲಯ 15 ಸಿಆರ್‌ಪಿಎಫ್‌ ತುಕಡಿ ಮತ್ತು 5 ಬಿಎಸ್‌ಎಫ್‌ ತುಕಡಿಗಳನ್ನು ಮಣಿಪುರದಲ್ಲಿ ನಿಯೋಜಿಸಿತ್ತು.

ಸಚಿವಾಲಯದ ತಂಡವು ಶೀಘ್ರದಲ್ಲೇ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಅಧಿಕಾರಿಗಳಿಗೆ ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಎಎಎಫ್‌ಎಸ್‌ಪಿಎ (AFSPA) ಅಥವಾ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ‘ಅತಿಸೂಕ್ಷ್ಮ’ ಪ್ರದೇಶಗಳಲ್ಲಿ ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾದ ಎಲ್ಲಿಯಾದರೂ ಕಾರ್ಯನಿರ್ವಹಿಸಲು ಮಿಲಿಟರಿಗೆ ಎಎಎಫ್‌ಎಸ್‌ಪಿಎ ವ್ಯಾಪಕ ಅಧಿಕಾರವನ್ನು ನೀಡುತ್ತದೆ. ಇದು ಜಾರಿಗೆ ಬಂದರೆ ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಮಿಲಿಟರಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯ ಮತ್ತು ಕೇಂದ್ರ ಪಡೆಗಳನ್ನು ಸೇರಿಸಿ ಕಾರ್ಯಾಚರಣೆ ನಡೆಯಲಿದೆ. ಕಳೆದ ವಾರ ಆಡಳಿತ ರೂಢ ಬಿಜೆಪಿಯ ಶಾಸಕರು ಮತ್ತು ಆರೋಗ್ಯ ಸಚಿವರು ಸೇರಿ ನಾಲ್ವರು ಮುಖಂಡರ ಮನೆ ಮೇಲೆ ದಾಳಿ ನಡೆದಿದೆ. ಮಾತ್ರವಲ್ಲ ಉದ್ರಿಕ್ತರ ಗುಂಪು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಮನೆ ಮೇಲೂ ಆಕ್ರಮಣ ನಡೆಸಲು ಮುಂದಾಗಿತ್ತು.

ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಅಮಿತ್‌ ಶಾ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅಮಿತ್‌ ಶಾ ಕಾರ್ಯಕ್ರಮವನ್ನೆಲ್ಲ ರದ್ದುಗೊಳಿಸಿ ಮಣಿಪುರ ಪರಿಸ್ಥಿತಿ ಅವಲೋಕಿಸಲು ದಿಲ್ಲಿಗೆ ಭಾನುವಾರ ಧಾವಿಸಿದ್ದರು. 24 ಗಂಟೆಯ ಅಂತರದಲ್ಲಿ ಅವರು 2 ಬಾರಿ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕಳೆದ ವರ್ಷ ಆರಂಭವಾದ ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಕೆಲವು ದಿನಗಳಿಂದ ಶಾಂತವಾಗಿದ್ದ ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ಶಂಕಿತ 10 ಕುಕಿ ಬಂಡುಕೋರರು ಹತರಾಗಿದ್ದರು. ಅಲ್ಲದೆ ನಾಪತ್ತೆಯಾಗಿದ್ದ ಮೈತೈ ಸಮುದಾಯದ 6 ಮಂದಿ ಮೃತದೇಹ ಪತ್ತೆಯಾಗಿದ್ದು, ಅಲ್ಲಿನ ಸ್ಥಿತಿ ನಿಗಿ ನಿಗಿ ಕೆಂಡದಂತಾಗಿದೆ.

ಈ ಸುದ್ದಿಯನ್ನೂ ಓದಿ: ಮಣಿಪುರ-ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ; ತೀವ್ರ ನಿಗಾ