ಮಣಿಪುರ: ಕಳೆದ ಕೆಲವು ತಿಂಗಳಿನಿಂದ ಮಣಿಪುರ (Manipur) ಪದೇ ಪದೆ ಹೊತ್ತಿ ಉರಿಯುತ್ತಿದೆ. ಆಗಾಗ ಶಾಂತವಾಗುವ ಈಶಾನ್ಯ ರಾಜ್ಯದಲ್ಲಿ ಮತ್ತೆ ಮತ್ತೆ ಹಿಂಸಾಚಾರ ಭುಗಿಲೇಳುತ್ತಿದೆ. ಮೇಲ್ನೋಟಕ್ಕೆ ಇದು ಜನಾಂಗೀಯ ಕದನ. ಮೀಟಿ ಹಾಗೂ ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷ(Violence). ಆದರೆ ಈ ದ್ವೇಷದ ಜ್ವಾಲೆಗೆ ಹಲವು ಆಯಾಮಗಳಿವೆ. ಅಂತಾರಾಷ್ಟ್ರೀಯ ಶಕ್ತಿಗಳ ಪ್ರವೇಶವೂ ಆಗಿದೆ. ಭೂಮಿಯ ವಿಚಾರವಾಗಿ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತಿದೆ. ಜತೆಯಲ್ಲೇ ಒಂದಷ್ಟು ಸುಳ್ಳು ಸುದ್ದಿಗಳೂ ಆರ್ಭಟಿಸುತ್ತಿವೆ. ಕಳೆದ 3 ತಿಂಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ನಿರಾಶ್ರಿತರ ಮೇಲೆ ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ವಿಡಿಯೋಗಳು ವೈರಲ್ ಆಗುತ್ತಿವೆ (Manipur Violence).
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶ ರಕ್ಷಣೆಯ ಕೆಲಸ ಮಾಡಿದ್ದ ಮಣಿಪುರ ಮಾಜಿ ಸೈನಿಕನೊಬ್ಬನ ಪತ್ನಿ ಬಲಿಯಾಗಿದ್ದರು. ಇದರ ಜತೆ ಇಬ್ಬರು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಮಣಿಪುರದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಕುಕಿ ಸಮುದಾಯಕ್ಕೆ ಸೇರಿದವರು ಎನ್ನಲಾದ ಈ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ದುಷ್ಟರು, ಮಣಿಪುರದ ರಸ್ತೆಗಳಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ್ದರು ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಧಾನಿ ಮೋದಿ ಅವರೂ ಕೂಡಾ ಘಟನೆ ಕುರಿತಾಗಿ ಆಕ್ರೋಶ ಹೊರಹಾಕಿದ್ದರು. ಇಬ್ಬರು ಸಂತ್ರಸ್ತ ಮಹಿಳೆಯರು ಹಾಗೂ ಅವರ ಇಬ್ಬರು ಸಂಬಂಧಿಕರು ಈಗ ಪೊಲೀಸರ ಆಶ್ರಯದಲ್ಲಿದ್ದಾರೆ. ಜುಲೈನಲ್ಲಂತೂ ಮಣಿಪುರ ಶಾಂತವಾಗಿಯೇ ಇತ್ತು. ಅಲ್ಲಿಯವರೆಗೂ ಈ ಘಟನೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಜುಲೈ ಮಧ್ಯ ಭಾಗದಲ್ಲಿ ಶಾಂತವಾಗಿದ್ದ ಮಣಿಪುರದಲ್ಲಿ ಈ ವೈರಲ್ ವಿಡಿಯೋ ಮತ್ತೆ ಬೆಂಕಿ ಹಚ್ಚಿತು.
ಇದೀಗ ಮತ್ತೊಂದು ರಾಕ್ಷಸಿ ಕೃತ್ಯಕ್ಕೆ ಮಣಿಪುರ ಸಾಕ್ಷಿಯಾಗಿದ್ದು, ಮೂವರು ಮಕ್ಕಳ ತಾಯಿಯನ್ನು ಅತ್ಯಂತ ಬರ್ಬರವಾಗಿ ಹತ್ಯೆ(woman killed) ಮಾಡಲಾಗಿದೆ. ಹಮಾರ್ ಸಮುದಾಯಕ್ಕೆ ಸೇರಿದ ಈ ಮಹಿಳೆಯನ್ನು ಸಶಸ್ತ್ರಧಾರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದು, ಬಳಿಕ ಬೆಂಕಿ ಹಚ್ಚಿ ಮಹಿಳೆ ಶವವನ್ನು ಸುಟ್ಟು ಹಾಕಿದ್ದಾರೆ.
ಗುರುವಾರ (ನ. 7) ರಾತ್ರಿ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪುಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ.
ಈ ಹಿಂದೆ ನಡೆದಷ್ಟೇ ಕ್ರೂರವಾಗಿ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದು, ಮೈತೇಯ್ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ಮುಂದುವರಿದಿದೆ. ಈ ಮಧ್ಯೆ ಮೈತೇಯ್ ಸಮುದಾಯಕ್ಕೆ ಸೇರಿದ ಶಸಸ್ತ್ರಸಜ್ಜಿತ ಗುಂಪು ಜಿರಿಬಾಮ್‌ನ ಜೈರವನ್ ಗ್ರಾಮಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಿದೆ. ಅಪರಿಚಿತ ಗುಂಪುಗಳ ನಡುವೆ ಗುಂಡಿನ ದಾಳಿಗಳು ನಡೆದಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ದಂಡುಕೋರರು ಇಲ್ಲಿನ ಮನೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆಯುತ್ತಿದ್ದು, ಇವರ ಉಗ್ರತನಕ್ಕೆ 3 ಮಕ್ಕಳ ತಾಯಿ ಬಲಿಯಾಗಿದ್ದಾರೆ.
ಇನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಮಹಿಳೆಯನ್ನು ಜೊಸಾಂಗ್ಕಿಮ್ ಎಂದು ಗುರುತಿಸಲಾಗಿದ್ದು, ಆಕೆ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಗುಂಡು ದಾಳಿ ನಡೆಯುವ ಸಂದರ್ಭದಲ್ಲಿ ಇಲ್ಲಿದ್ದ ಜನ ಕಾಡಿನ ಒಳಗೆ ಓಡಿ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಆದರೆ ದುರಾದೃಷ್ಟವಶಾತ್ ಜೊಸಾಂಗ್ಕಿಮ್ ಅವರು ಮಾತ್ರ ಆ ನೀಚರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಮೈತೇಯ್ ಸಮುದಾಯದ ಬಂದೂಕುಧಾರಿಗಳು ಸೆರೆಹಿಡಿದು, ಅತ್ಯಾಚಾರ ಮಾಡಿ ಮತ್ತು ಸುಟ್ಟು ಕೊಂದಿದ್ದಾರೆ ಎಂದು ಹೇಳಲಾಗಿದೆ.
ಇಷ್ಟಾದರೂ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಹಾಗೂ ಮಹಿಳೆಯ ಹತ್ಯೆ ಸೇರಿದಂತೆ ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ಮಣಿಪುರ ಪೊಲೀಸರಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.
ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಾಂಬ್ ಸ್ಫೋಟ, ಗುಂಡಿನ ಚಕಮಕಿ