ಇಂಫಾಲ್ : ಮಣಿಪುರದಲ್ಲಿ ಹಿಂಸಾಚಾರ ಶಾಂತವಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಕುಕಿ ಸಮುದಾಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಜಿರೀಬಾಮ್ ಜಿಲ್ಲೆಯಲ್ಲಿ ಭದ್ರತಾಪಡೆಗಳ ಜತೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದ 10 ಬಂಡುಕೋರರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಅವರ ಶವಯಾತ್ರೆ ನಡೆಸಲು ನಿರ್ಧರಿಸಿದೆ. ಕುಕಿ ಸಮುದಾಯದ ಒಗ್ಗಟ್ಟು ಪ್ರದರ್ಶಿಸಲು ಮಂಗಳವಾರ ಚುರಾಚಂದ್‌ಪುರ್‌ನಲ್ಲಿ ಕುಕಿ ಸಮುದಾಯದವರು ಶವಪೆಟ್ಟಿಗೆ ರ‍್ಯಾಲಿ (Coffin rally) ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ(Manipur Violence).
ಝೋಮಿ ಸ್ಟೂಡೆಂಟ್ಸ್ ಫೆಡರೇಶನ್ (ZSF), ಕುಕಿ ಸ್ಟೂಡೆಂಟ್ಸ್ ಆರ್ಗನೈಸೇಶನ್ (KSO) ಮತ್ತು ಹ್ಮಾರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (HSA) ಸೋಮವಾರ ಹೊರಡಿಸಿದ ಜಂಟಿ ಸಾರ್ವಜನಿಕ ಸೂಚನೆಯಲ್ಲಿ,10 ನೇ ತರಗತಿಯ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳುಹಿಸುವಂತೆ ಶಾಲಾ-ಕಾಲೇಜುಗಳಿಗೆ ನಿರ್ದೇಶಿಸಿದೆ.
ರ‍್ಯಾಲಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕಪ್ಪು ಬಟ್ಟೆಗಳನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ. ಮೃತ ಯುವಕರ ಮೃತದೇಹಗಳು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರುವುದರಿಂದ ರ‍್ಯಾಲಿಯಲ್ಲಿ 10 ಸಾಂಕೇತಿಕ ಶವಪೆಟ್ಟಿಗೆಯನ್ನು ಕೊಂಡೊಯ್ಯಲಾಗುವುದು ಎಂದು ಸಂಘಟಕರೊಬ್ಬರು ತಿಳಿಸಿದ್ದಾರೆ. ಇದರ ಮಧ್ಯೆ ಕುಕಿ-ಜೋ ಸಮುದಾಯದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಮೃತರ ಕುಟುಂಬಗಳಿಗೆ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಒದಗಿಸುವವರೆಗೆ ಅಂತ್ಯಕ್ರಿಯೆಗಳನ್ನು ನಡೆಸುವುದಿಲ್ಲ ಎಂದು ಭಾನುವಾರ ಘೋಷಿಸಿದೆ.
ನವೆಂಬರ್ 11 ರಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಬಂಡುಕೋರರು ಹತರಾಗಿದ್ದರು. ಅದರ ಪ್ರತಿಕಾರವಾಗಿ ಬಂಡುಕೋರರು ಮೈತೆಯಿ ಸಮಾಜದ ಆರು ಜನರನ್ನು ಅಪಹರಣ ಮಾಡಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಮಣಿಪುರದ ಜಿರಿಬಾಮ್‌ನಿಂದ ನಾಪತ್ತೆಯಾಗಿದ್ದ 6 ಮಂದಿ ಶವವಾಗಿ ಪತ್ತೆಯಾಗಿದ್ದಾರೆ . ಜಿರಿಬಾಮ್ ಜಿಲ್ಲೆಯ ಹೆರೋಜಿತ್ ಹಾಗೂ ಆತನ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ಅವರ ಎರಡು ವರ್ಷದ ಮಗನ್ನು ಕೊಲ್ಲಲಾಗಿದ್ದು, ಆತನ ರುಂಡ ಕತ್ತರಿಸಲಾಗಿದೆ. ಆತನ 65 ವರ್ಷದ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. ಈ ಶವಗಳು ಸಿಕ್ಕ ಬಳಿಕ ಹೀರೋಜಿತ್ ಪತ್ನಿ, ಅತ್ತೆ, ಪತ್ನಿಯ ಸಹೋದರಿ ಮತ್ತು ಆಕೆಯ ಮಗನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಅಮಾಯಕರನ್ನು ಹತ್ಯೆಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮೈತೆಯಿ ಸಮುದಾಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಉದ್ರಿಕ್ತ ಗುಂಪೊಂದು ಶನಿವಾರ ಶಾಸಕರು ಮತ್ತು ಸಚಿವರ ಮನೆಗಳಿಗೆ ಮುತ್ತಿಗೆ ಹಾಕಿ, ಬೆಂಕಿ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಿದ್ದರು. ಶನಿವಾರ ನಡೆಸಿದ ಹಿಂಸಾಚಾರದ ಸಂಬಂಧ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : Manipur Violence: ಮಣಿಪುರ ಹಿಂಸಾಚಾರ; ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿರೇನ್ ಸಿಂಗ್
ಮಣಿಪುರದಲ್ಲಿ ಶಾಂತಿ ಸ್ಥಾಪನೆಗಾಗಿ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದೆ. ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ಅವರನ್ನು ಮಣಿಪುರಕ್ಕೆ ನಿಯೋಜಿಸಲಾಗಿದೆ. 5,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ಸಿಆರ್‌ಪಿಎಫ್ ಮತ್ತು ಬಿಎಸ್ಎಫ್‌ನ ಹೆಚ್ಚುವರಿ 50 ತುಕಡಿಗಳನ್ನು ಮಣಿಪುರಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ.