ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಉಗ್ರರು ನಿರ್ಮಿಸಿದ್ದಾರೆ ಎನ್ನಲಾದ 12 ಬಂಕರ್‌ಗಳನ್ನು ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ವಿವಿಧ ಜಿಲ್ಲೆಗಳಲ್ಲಿ ಧ್ವಂಸಗೊಳಿಸಿವೆ.
ಮಣಿಪುರ ರಾಜ್ಯ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ತಮೆಂಗ್‌ಲಾಂಗ್, ಇಂಫಾಲದ ಪೂರ್ವ, ಬಿಷ್ಣುಪುರ್, ಕಾಂಗ್‌ಪೋಕ್ಪಿ, ಚುರಾ ಚಂದ್‌ಪುರ ಮತ್ತು ಕಾಕ್‌ಚಿಂಗ್ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಬೆಟ್ಟ ಮತ್ತು ಕಣಿವೆಯಲ್ಲಿ ಉಗ್ರರು ನಿರ್ಮಿಸಿದ್ದ 12 ಬಂಕರ್ ಗಳನ್ನು ನಾಶಪಡಿಸಲಾಗಿದೆ ಎಂದು ಮಣಿಪುರ ಪೊಲೀಸರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದುಷ್ಕರ್ಮಿಗಳು ಹಾಗೂ ಉಗ್ರರ ಶೋಧದ ಸಮಯದಲ್ಲಿ ಸಾಹುಂಫೈ ಗ್ರಾಮದ ಗದ್ದೆಯಲ್ಲಿ ಮೂರು 51 ಎಂಎಂ ಗಾರೆ ಶೆಲ್‌ಗಳು ಮತ್ತು ಮೂರು 84 ಎಂಎಂ ಗಾರೆ ಶೆಲ್‌ಗಳು ಮತ್ತು ಕಾಂಗ್ವೈ ಮತ್ತು ಎಸ್. ಕೋಟ್ಲಿಯನ್ ಗ್ರಾಮಗಳ ನಡುವಿನ ಗದ್ದೆಯಲ್ಲಿ ಒಂದು ಐಇಡಿ ಪತ್ತೆಯಾಗಿದೆ. ರಾಜ್ಯ ಬಾಂಬ್ ನಿಷ್ಕ್ರಿಯ ತಂಡವು ಸ್ಥಳದಲ್ಲಿ ಮಾರ್ಟರ್ ಶೆಲ್‌ಗಳು ಮತ್ತು ಐಇಡಿಯನ್ನು ನಾಶಗೊಳಿಸಿದೆ ಎಂದು ಪೊಲೀಸರು ನೀಡಿರುವ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೀಸಲಾತಿಗಾಗಿ ನಡೆದ ಪ್ರತಿಭಟನಾ ಯಾತ್ರೆ ವೇಳೆ ಆರಂಭವಾದ ಗಲಾಟೆ, ಇಡಿ ರಾಜ್ಯದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಹಿಂಚಾಸಾರ ನಿಲ್ಲುತ್ತಿಲ್ಲ. ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಪೊಲೀಸರು, ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಕರ್ಫ್ಯೂ ಉಲ್ಲಂಘನೆ, ಮನೆಗಳಲ್ಲಿ ಕಳ್ಳತನ, ಬೆಂಕಿ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 135 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ಒಟ್ಟು 1,100 ಶಸ್ತ್ರಾಸ್ತ್ರಗಳು, 13,702 ಮದ್ದುಗುಂಡುಗಳು ಮತ್ತು ವಿವಿಧ ರೀತಿಯ 250 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಧ್ವಜ ಮೆರವಣಿಗೆ, ಪ್ರದೇಶ ಪ್ರಾಬಲ್ಯ, ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ರಾಜ್ಯದಲ್ಲಿನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸಾಧ್ಯ ಇರುವ ಎಲ್ಲ ಸಹಾಯವನ್ನು ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಕೇಂದ್ರೀಯ ನಿಯಂತ್ರಣ ಕೊಠಡಿಯ ಸಂಖ್ಯೆ – 9233522822 ಕ್ಕೆ ಡಯಲ್ ಮಾಡುವ ಮೂಲಕ ಯಾವುದೇ ವಿಚಾರವನ್ನು ತಿಳಿಸಬಹುದು. ಜೊತೆಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳಿದ್ದರೆ ಅಂತಹುಗಳನ್ನ ಪೊಲೀಸರಿಗೆ ಮತ್ತು ಭದ್ರತಾ ಪಡೆಗಳಿಗೆ ಹಿಂದಿರುಗಿಸಲು ಈ ನಂಬರ್ನ್ನು ಸಂಪರ್ಕಿಸಬಹುದಾಗಿದೆ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.