Sunday, 15th December 2024

ಇಂದು ಜಾರಿ ನಿರ್ದೇಶನಾಲಯದಿಂದ ಸಿಸೋಡಿಯಾ ವಿಚಾರಣೆ

ವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾ ಲಯವು ವಿಚಾರಣೆಗೆ ಒಳಪಡಿಸಿ ನಿಖರವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ತನಿಖಾ ಸಂಸ್ಥೆಯೂ ಹೈದರಾಬಾದ್‌ ಮೂಲದ ಮದ್ಯ ಉದ್ಯಮಿ ಅರುಣ್‌ ರಾಮಚಂದ್ರ ಪಿಳ್ಳೈ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಿಹಾರ್‌ ಜೈಲಿಗೆ ತಲುಪಲಿದ್ದು, ಅಕ್ರಮ ಹಣ ತಡೆಗಟ್ಟುವಿಕೆ ಕಾಯಿದೆಯ ಅಡಿಯಲ್ಲಿ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಯನ್ನು ಪಡೆಯಲಾಗುತ್ತದೆ.

ಸಿಸೋಡಿಯಾ ಅವರನ್ನು ಸಿಬಿಐ ಫೆಬ್ರುವರಿ 26ರಂದು ಬಂಧಿಸಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅಕ್ರಮ ಹಣ ತಡೆಗಟ್ಟುವಿಕೆ ಕಾಯಿದೆಯ ಕ್ರಿಮಿನಲ್‌ ಸೆಕ್ಷನ್‌ಗಳ ಅಡಿಯಲ್ಲಿ ಸುದೀರ್ಘ ವಿಚಾರಣೆಗೆ ಒಳಪಡಿಸಿದ ನಂತರ ಪಿಳ್ಳೈ ಅವರನ್ನು ಸೋಮವಾರ ಇಡಿ ಬಂಧಿಸಿದೆ.

ಉದ್ಯಮಿ ಪಿಳ್ಳೈ ‘ಸೌತ್‌ ಗ್ರೂಪ್‌’ ನ ಮದ್ಯದ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿಸಿಲಾದ 11ನೇ ವ್ಯಕ್ತಿಯಾಗಿದ್ದಾರೆ.