Sunday, 27th October 2024

Mann Ki Baat: ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ; ಮನ್‌ ಕೀ ಬಾತ್‌ ಪ್ರಮುಖಾಂಶಗಳು ಇಲ್ಲಿವೆ

Mann ki baat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಮನ್‌ ಕೀ ಬಾತ್‌(Mann Ki Baat) ಕಾರ್ಯಕ್ರಮದ 115 ನೇ ಸಂಚಿಕೆ ಇಂದು ಪ್ರಸಾರವಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸೈಬರ್‌ ಕ್ರೈಂ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೇ ಇಂತಹ ವಂಚನೆಯಿಂದ ಜನ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿಸಿಕೊಟ್ಟರು. ಇದರ ಜೊತೆಗೆ ಸರ್ದಾರ್ ಪಟೇಲ್ ಮತ್ತು ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆ ಬಗ್ಗೆ ಮಾತನಾಡಿದರು.

ಇಡೀ ದೇಶಾದ್ಯಂತ ಈ ಇಬ್ಬರು ದಿಗ್ಗಜರ 150 ನೇ ಜನ್ಮದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ಇಬ್ಬರೂ ಮಹಾನ್ ಚೇತನಗಳು ವಿಭಿನ್ನ ಸವಾಲುಗಳನ್ನು ಎದುರಿಸಿದರು. ಆದರೆ ಅವರ ದೃಷ್ಟಿ ಒಂದೇ ಆಗಿತ್ತು, ಅದು ದೇಶದ ಏಕತೆ ಎಂದು ಪ್ರಧಾನಿ ಹೇಳಿದರು.

ಸೈಬರ್‌ ಕ್ರೈಂ ಮತ್ತು ಡಿಜಿಟಲ್‌ ಅರೆಸ್ಟ್‌ ಬಗ್ಗೆ ಬಗ್ಗೆ ಪ್ರಸ್ತಾಪಿಸಿದ ಮೋದಿ, ವಂಚನೆ ಗ್ಯಾಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು. ಈ ಕಿಡಿಗೇಡಿಗಳು ನಿಮ್ಮ ಬಗ್ಗೆ ತುಂಬಾ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಂತರ ತನಿಖಾ ತಂಡದಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಿಮ್ಮ ಹೆದರಿಸುತ್ತಾರೆ. ನಿಮಗೆ ಅಂತಹ ಕರೆ ಬಂದರೆ, ಭಯಪಡಬೇಡಿ, ಯಾವುದೇ ತನಿಖಾ ಸಂಸ್ಥೆಯು ಫೋನ್ ಮೂಲಕ ವಿಚಾರಣೆ ಮಾಡುವುದಿಲ್ಲ ಎಂಬುದು ತಿಳಿದಿರಬೇಕು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ನೀಡಬೇಡಿ. ಸಾಧ್ಯವಾದರೆ, ಸ್ಕ್ರೀನ್ ಶಾಟ್‌ಗಳು ಮತ್ತು ರೆಕಾರ್ಡಿಂಗ್‌ಗಳನ್ನು ಮಾಡಿಟ್ಟುಕೊಳ್ಳಿ ಎಂದು ಅರಿವು ಮೂಡಿಸಿದರು.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ಪ್ರತಿ ವರ್ಗ ಮತ್ತು ವಯಸ್ಸಿನ ಜನರು ಡಿಜಿಟಲ್ ವಂಚನೆಗೆ ಬಲಿಯಾಗುತ್ತಾರೆ. ಭಯದಿಂದ ಜನರು ಕಷ್ಟಪಟ್ಟು ಸಂಪಾದಿಸಿದ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ನಿಮಗೆ ಈ ರೀತಿಯ ಕರೆ ಬಂದರೆ, ನೀವು ಭಯಪಡಬೇಕಾಗಿಲ್ಲ. ಯಾವುದೇ ತನಿಖಾ ಸಂಸ್ಥೆಯು ಫೋನ್ ಕರೆ ಅಥವಾ ವೀಡಿಯೊ ಕರೆ ಮೂಲಕ ಈ ರೀತಿ ವಿಚಾರಣೆ ನಡೆಸುವುದಿಲ್ಲ ಎಂದು ನೀವು ತಿಳಿದಿರಬೇಕು ಎಂದರು.

ಮನ್‌ ಕೀ ಬಾತ್‌ನ ಪ್ರಮುಖಾಂಶಗಳು

ಛೋಟಾ ಭೀಮ್‌ನಂತೆ, ನಮ್ಮ ಇತರ ಆನಿಮೇಟೆಡ್ ಸಿರೀಸ್‌ ಕೃಷ್ಣ, ಮೋಟು-ಪಟ್ಲು, ಬಾಲ್ ಹನುಮಾನ್ ಕೂಡ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿವೆ. ಭಾರತೀಯ ಅನಿಮೇಟೆಡ್ ಪಾತ್ರಗಳು ಮತ್ತು ಚಲನಚಿತ್ರಗಳು ಅವುಗಳ ವಿಷಯ ಮತ್ತು ಸೃಜನಶೀಲತೆಯಿಂದಾಗಿ ಪ್ರಪಂಚದಾದ್ಯಂತ ಇಷ್ಟವಾಗುತ್ತಿವೆ. ಭಾರತವು ಅನಿಮೇಷನ್ ಕ್ಷೇತ್ರದಲ್ಲಿ ಕ್ರಾಂತಿಯ ಹಾದಿಯಲ್ಲಿದೆ ಎಂದರು.

ಭಾರತದಲ್ಲಿ ಗೇಮಿಂಗ್ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಭಾರತೀಯ ಗೇಮಿಂಗ್ ಪ್ರಪಂಚದಾದ್ಯಂತ ಪ್ರಸಿದ್ಧವಾಗುತ್ತಿವೆ.‌ ಭಾರತದಲ್ಲಿ ಸೃಜನಶೀಲ ಶಕ್ತಿಯ ಅಲೆ ನಡೆಯುತ್ತಿದೆ. ‘ಮೇಡ್ ಇನ್ ಇಂಡಿಯಾ’, ‘ಮೇಡ್ ಬೈ ಇಂಡಿಯಾ’ ಅನಿಮೇಷನ್ ಲೋಕದಲ್ಲಿ ಮಿಂಚುತ್ತಿವೆ ಎಂದರು.

ಈ ಸುದ್ದಿಯನ್ನೂ ಓದಿ: Modi Visit Russia : ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಶಾಂತಿಯುತ ಪರಿಹಾರ; ಪುಟಿನ್‌ಗೆ ಪ್ರಧಾನಿ ಮೋದಿ ಭರವಸೆ