Friday, 22nd November 2024

ಶಿಕ್ಷಣ, ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ: ವೇಳಾಪಟ್ಟಿ ಕುರಿತು ಫೆ.5 ರಂದು ತೀರ್ಮಾನ

ನವದೆಹಲಿ: ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ನೀಡುವ 2018ರ ಕಾನೂನಿಗೆ ಸಂಬಂಧಿಸಿದ ಅರ್ಜಿ ವಿಚಾರಣೆಯ ವೇಳಾಪಟ್ಟಿ ಕುರಿತು ಫೆ.5 ರಂದು ತೀರ್ಮಾನಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಸದ್ಯ ಸುಪ್ರೀಂಕೋರ್ಟ್‌, ಕೊರೊನಾ ಪಿಡುಗಿನಿಂದಾಗಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ವರ್ಚುವಲ್‌ ವಿಚಾರಣೆಯನ್ನು ನಡೆಸುತ್ತಿದೆ.

ಅರ್ಜಿ ಸಂಬಂಧ ವಿಚಾರಣೆಯನ್ನು ಮಾರ್ಚ್‌ನಲ್ಲಿ ನಡೆಸುವಂತೆ ಮಹಾರಾಷ್ಟ್ರ ಸರ್ಕಾರವು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ನೇತೃತ್ವದ ಐದು ಸದಸ್ಯರ ವಿಸ್ತ್ರೃತ ಪೀಠಕ್ಕೆ ಮನವಿ ಮಾಡಿದೆ.

‘ಈ ರೀತಿಯ ಅರ್ಜಿಯನ್ನು ನೇರವಾಗಿ ವಿಚಾರಣೆ ನಡೆಸುವುದು ಉತ್ತಮವಾಗಿರುತ್ತದೆ. ಆದರೆ ಈ ಸಂದರ್ಭದಲ್ಲಿ ನ್ಯಾಯಾ ಲಯಕ್ಕೆ ಹಾಜರಾಗುವುದು ಅಪಾಯಕರ. ಹಾಗಾಗಿ ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ’ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಮುಕುಲ್‌ ರೋಹಟಗಿ ಅವರು ಮನವಿ ಮಾಡಿದ್ದಾರೆ.

‘ದೇಶದಲ್ಲಿ ಈಗಾಗಲೇ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿದೆ. 60 ವರ್ಷ ಮೇಲ್ಪಟ್ಟ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರಿಗೆ ಲಸಿಕೆ ನೀಡಲು ಆರರಿಂದ 8 ವಾರಗಳು ತೆಗೆದುಕೊಳ್ಳಬಹುದು. ಹಾಗಾಗಿ ಈ ಅರ್ಜಿ ವಿಚಾರಣೆಯನ್ನು ಮಾರ್ಚ್‌ ತಿಂಗಳಿಗೆ ಮುಂದೂಡಬೇಕು’ ಎಂದು ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ.