Friday, 22nd November 2024

ನಾಮಪತ್ರ ಸಲ್ಲಿಸಿದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾ

ನವದೆಹಲಿ: ಆಗಸ್ಟ್ ೬ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಗೆ ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವಾ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ವರಿಷ್ಠ ಶರದ್ ಪವಾರ್, ಶಿವಸೇನೆಯ ಸಂಜಯ್ ರಾವತ್, ಸಿಪಿಐಯ ಡಿ.ರಾಜಾ ಹಾಗೂ ಸಿಪಿಐ (ಎಂ)ಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹಾಗೂ ಪ್ರತಿಪಕ್ಷದ ಇತರ ನಾಯಕರು ಅವರ ಜೊತೆಗಿದ್ದರು.

ಉಪ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷದ ಅಭ್ಯರ್ಥಿಯನ್ನಾಗಿ ಆಳ್ವಾ ಅವರನ್ನು ಭಾನುವಾರ ನಾಮ ನಿರ್ದೇಶಿಸಲಾಗಿತ್ತು. ಎನ್‌ಡಿಎಯು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧಂಖರ್ ಅವರನ್ನು ಅಭ್ಯರ್ಥಿ ಯನ್ನಾಗಿ ಕಣಕ್ಕಿಳಿಸಿದೆ.

ರಾಜಕೀಯದಲ್ಲಿ ಸೋಲು ಹಾಗೂ ಗೆಲುವು ಮುಖ್ಯವಲ್ಲ. ಯುದ್ಧದಲ್ಲಿ ಹೋರಾಡುವುದು ಮುಖ್ಯ. ನಾನು ಅವರ (ಎನ್‌ಡಿಎ) ಅಭಿಯಾನದ ವಿರುದ್ಧ ಹೋರಾಡಲಿದ್ದೇನೆ. ನಾನು ಯಾರೊಬ್ಬರಿಗೂ ಹೆದರಲಾರೆ ಎಂದು ಆಳ್ವಾ ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಆಳ್ವಾ ಅವರು ೧೯೯೧ರಿಂದ ೧೯೯೬ರ ವರೆಗೆ ಕೇಂದ್ರ ವೈಯಕ್ತಿಕ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿಯ ಖಾತೆಯ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಗೋವಾ, ಗುಜರಾತ್, ರಾಜಸ್ಥಾನ ಹಾಗೂ ಉತ್ತರಾಖಂಡದ ರಾಜ್ಯಪಾಲರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ ೧೦ರಂದು ಅಂತ್ಯಗೊಳ್ಳಲಿದೆ.