Wednesday, 11th December 2024

Me Too Row: ಬಾಲಿವುಡ್‌ನಲ್ಲಿ ಮತ್ತೆ ಭುಗಿಲೆದ್ದ #MeToo ವಿವಾದ; ಲೈಂಗಿಕ ದೌರ್ಜನ್ಯದ ವಿರುದ್ಧ ಬಿಗ್‌ಬಾಸ್‌ ವಿನ್ನರ್‌ ಧ್ವನಿ

Me too row

ನವದೆಹಲಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭುಗಿಲೆದ್ದಿರುವ ಮೀಟೂ ಪ್ರಕರಣ(Me Too Row)ಗಳ ಕಾವು ಇದೀಗ ಮತ್ತೆ ಬಾಲಿವುಡ್‌(Bollywood)ನತ್ತ ಮುಖ ಮಾಡಿದೆ. ಕಿರುತೆರೆ ನಟಿ, ಬಿಗ್‌ಬಾಸ್‌ ರಿಯಾಲಿಟಿ(BIGGBOSS) ಶೋ ವಿನ್ನರ್‌ ಶಿಲ್ಪಾ ಶಿಂಧೆ(Shilpa Shinde) ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಕುರಿತು ಧ್ವನಿ ಎತ್ತಿದ್ದಾರೆ. ಶಿಲ್ಪಾ ಶಿಂಧೆ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಹಿಂದಿ ಚಲನಚಿತ್ರ ನಿರ್ಮಾಪಕರೊಬ್ಬರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂಬ ವಿಚಾರವನ್ನು ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಒಮ್ಮೆ ಆಡಿಷನ್ ನೆಪದಲ್ಲಿ ಚಲನಚಿತ್ರ ನಿರ್ಮಾಪಕರನ್ನು ತಮ್ಮ ಜೊತೆ ಸಹಕರಿಸುವಂತೆ ಪೀಡಿಸಿದ್ದರು. ಆ ಸಮಯದಲ್ಲಿ ನಾನು ತುಂಬಾ ಮುಗ್ದೆಯಾಗಿದ್ದೆ. ಅವರ ಜತೆ ರೊಮ್ಯಾನ್ಸ್‌ ಮಾಡುವ ರೀತಿಯಲ್ಲಿ ನಟಿಸುವಂತೆ ಹೇಳಿದ್ದರು. ನಾನು ಅದರಂತೆ ಮಾಡಿದೆ. ಆದರೆ ಅವರು ತಮ್ಮ ನಿಯಂತ್ರಣ ಕಳೆದುಕೊಂಡು ನನ್ನ ಜತೆ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದರು. ಕೊನೆಗೆ ಆತನನ್ನು ದೂರಕ್ಕೆ ತಳ್ಳಿ ಅಲ್ಲಿಂದ ಓಡಿದ್ದೆ ಎಂದು ಶಿಲ್ಪಾ ಹೇಳಿದ್ದಾರೆ.

ಇನ್ನು ಆ ನಿರ್ಮಾಪಕನ ಹೆಸರು ಬಹಿರಂಗಪಡಿಸಲು ಶಿಲ್ಪಾ ನಿರಾಕರಿಸಿದ್ದಾರೆ. “ಅವರು ಹಿಂದಿ ಚಿತ್ರರಂಗದಿಂದ ಬಂದವರು. ಅವರು ಸಹ ನಟರಾಗಿದ್ದರಿಂದ ನಾನು ದೃಶ್ಯವನ್ನು ಮಾಡಲು ಒಪ್ಪಿಕೊಂಡೆ, ನಾನು ಸುಳ್ಳು ಹೇಳುತ್ತಿಲ್ಲ, ಆದರೆ ನಾನು ಅವರ ಹೆಸರನ್ನು ಹೇಳಲು ಸಾಧ್ಯವಿಲ್ಲ. ಅವನ ಮಕ್ಕಳು ಬಹುಶಃ ನನಗಿಂತ ಸ್ವಲ್ಪ ಚಿಕ್ಕವರು, ಮತ್ತು ನಾನು ಅವನನ್ನು ಹೆಸರಿಸಿದರೆ, ಅವರಿಗೆ ಸಮಸ್ಯೆಯಾಗುತ್ತದೆʼʼ ಎಂದು ಹೇಳಿದ್ದಾರೆ.

ಕೆಲವು ವರ್ಷಗಳ ನಂತರ, ನಾನು ಅವರನ್ನು ಮತ್ತೆ ಭೇಟಿಯಾದೆ, ಮತ್ತು ಅವರು ನನ್ನೊಂದಿಗೆ ದಯೆಯಿಂದ ಮಾತನಾಡಿದರು. ಅವರು ನನ್ನನ್ನು ಗುರುತಿಸಲಿಲ್ಲ ಮತ್ತು ನನಗೆ ಚಲನಚಿತ್ರ ಪಾತ್ರವನ್ನು ಸಹ ನೀಡಿದರು. ನಾನು ನಿರಾಕರಿಸಿದೆ. ಅವನಿಗೆ ಇನ್ನೂ ನನ್ನನ್ನು ನೆನಪಿಲ್ಲ ಎಂದು ತಿಳಿಸಿದ್ದಾರೆ.

ಭಾಬಿ ಜಿ ಘರ್ ಪರ್ ಹೈ! ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ, ಉದ್ಯಮದಲ್ಲಿ ಇನ್ನೂ ಅನೇಕರಿಗೆ ಇದೇ ರೀತಿಯ ಅನುಭವಗಳು ಸಂಭವಿಸಿವೆ ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ನ್ಯಾ. ಹೇಮಾ ನೇತೃತ್ವದ ಸಮಿತಿ ಮಲಯಾಳಂ ಚಿತ್ರರಂಗ ಸೆಕ್ಸ್‌ ಮಾಫಿಯಾ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ಬಯಲಿಗೆಳೆದಿತ್ತು. ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ನಟರು ಎತ್ತಿರುವ ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸ್ಪರ್ಜನ್ ಕುಮಾರ್ ನೇತೃತ್ವದಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲು ನಿರ್ಧರಿಸಿದ್ದಾರೆ. ಇನ್ನು ಮಲಯಾಳಂ ನಟರಾದ ಸಿದ್ದಿಕಿ, ಜಯಸೂರ್ಯ, ಮುಖೇಶ್‌, ನಿರ್ದೇಶಕರಾದ ರಂಜಿತ್‌ ಸೇರಿದಂತೆ ಹಲವರ ವಿರುದ್ಧ ಮೀಟೂ ಕೇಸ್‌ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Me Too Movement: ಕೇರಳದಂತೆ ಲೈಂಗಿಕ ದೌರ್ಜನ್ಯ ತನಿಖಾ ಸಮಿತಿ ರಚಿಸಿ: ಸಿಎಂಗೆ ನಟಿ ಸಂಜನಾ ಮನವಿ