ಭೋಪಾಲ್: ಮಧ್ಯ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ಪತ್ರಕರ್ತರ ಬಟ್ಟೆ ಬಿಚ್ಚಿಸಿ, ಒಳ ಉಡುಪಿನಲ್ಲಿ ನಿಲ್ಲಿಸಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಇದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ಲಾಕ್‌ಅಪ್‌ನಲ್ಲಿ ಕಳಚಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು ‘ಸತ್ಯಕ್ಕೆ ಬೆದರುತ್ತಿದೆ’ ಎಂದಿದ್ದಾರೆ.
ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಟ್ಟೆ ಕಳಚಿಟ್ಟು ನಿಂತಿರುವ ಪತ್ರಕರ್ತರ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಬಿಜೆಪಿ ಶಾಸಕ ಕೇದಾರ್‌ನಾಥ್ ಶುಕ್ಲ ಮತ್ತು ಅವರ ಮಗ ಗುರು ದತ್ತ ವಿರುದ್ಧ ಕೆಟ್ಟದಾಗಿ ಮಾತನಾಡಿರುವ ಆರೋಪದ ಮೇಲೆ ಪೊಲೀಸರು ರಂಗಭೂಮಿ ಕಲಾವಿದ ನೀರಜ್ ಕುಂದರ್ ಅವರನ್ನು ಬಂಧಿಸಿದ್ದಾರೆ. ಕಲಾವಿದ ನೀರಜ್‌ರನ್ನು ಬಿಡುಗಡೆ ಮಾಡು ವಂತೆ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದರು.
ಒಡಿಶಾ ಕಾಂಗ್ರೆಸ್ ಘಟಕದ ಅಧ್ಯಕ್ಷ ನಿರಂಜನ್ ಪಟ್ನಾಯಕ್ ‘ಬಿಜೆಪಿ ಶಾಸಕರ ವಂಚನೆಯನ್ನು ಬಯಲಿಗೆಳೆದಿದ್ದಾರೆ, ಹಾಗಾಗಿ ಪೊಲೀಸರು ಪತ್ರಕರ್ತರ ಬಟ್ಟೆ ಕಳಚಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.