Saturday, 23rd November 2024

40 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದು..!

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ನಿಗದಿಪಡಿಸಿದ ಮಾನದಂಡಗಳ ಪಾಲನೆಯಲ್ಲಿ ಲೋಪದೋಷ ಕಂಡುಬಂದಿದ್ದು ಎರಡು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 40 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ.

ತಮಿಳುನಾಡು, ಗುಜರಾತ್, ಅಸ್ಸಾಂ, ಪಂಜಾಬ್, ಆಂಧ್ರಪ್ರದೇಶ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸುಮಾರು 100 ವೈದ್ಯಕೀಯ ಕಾಲೇಜುಗಳು ಎನ್‌ಎಂಸಿ ಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲು ವಿಫಲವಾಗಿದ್ದು ಮಾನ್ಯತೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವೈದ್ಯಕೀಯ ಕಾಲೇಜುಗಳು ನಿಗದಿಗೊಳಿಸಿದ ನಿಯಮದ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಅಧ್ಯಾಪಕರು ಹಾಗೂ ಸಿಸಿಟಿವಿ ಕ್ಯಾಮರಾಗಳಿಗೆ ಸಂಬಂಧಿಸಿದ ಹಲವಾರು ಲೋಪದೋಷ, ಆಧಾರ್-ಸಂಯೋಜಿತ ಬಯೋಮೆಟ್ರಿಕ್ ಹಾಜರಾತಿ ಕಾರ್ಯ ವಿಧಾನ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, 2014 ರಿಂದ ವೈದ್ಯಕೀಯ ಕಾಲೇಜುಗಳ ಆರಂಭದ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. 2014 ಕ್ಕೆ ಮೊದಲು ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387. ಪ್ರಸ್ತುತ 654 ವೈದ್ಯ ಕಾಲೇಜುಗಳಿದ್ದು ಶೇ 69 ರಷ್ಟು ಹೆಚ್ಚಾಗಿವೆ ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಫೆಬ್ರವರಿಯಲ್ಲಿ ರಾಜ್ಯಸಭೆಗೆ ತಿಳಿಸಿದ್ದರು.

ದೇಶದಲ್ಲಿ ವೈದ್ಯ ಸೀಟುಗಳನ್ನು ಹೆಚ್ಚಿಸಲು ಸರ್ಕಾರವು ಜಿಲ್ಲಾ / ರೆಫರಲ್ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಪ್ರಾಯೋಜಿತ ಯೋಜನೆ ಜಾರಿ ಮಾಡಿದೆ. ಅದರಡಿ 157 ಅನುಮೋದಿತ ವೈದ್ಯಕೀಯ ಕಾಲೇಜುಗಳಲ್ಲಿ 94 ಹೊಸ ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.