Sunday, 1st December 2024

Mental Health: ಸಾಮಾಜಿಕ ಮಾಧ್ಯಮ ಬಳಕೆಯಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೆ?

Mental Health

ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಈಗ ಮೊಬೈಲ್ (Mobile) ದಾಸರಾಗಿ ಬಿಟ್ಟಿದ್ದಾರೆ. ಅದನ್ನು ಒಂದು ಕ್ಷಣ ಬಿಟ್ಟು ಇರುವುದು ಕೂಡ ಕಷ್ಟಕರವಾಗಿದೆ. ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ (social media) ಸಮಯ ಕಳೆಯುವುದು ಮಾನಸಿಕ ಆರೋಗ್ಯದ (Mental Health) ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮವನ್ನು ಬೀರಬಹುದು.

ಆಧುನಿಕ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಬಳಕೆ ಎಲ್ಲರಿಗೂ ಅನಿವಾರ್ಯವೂ ಹೌದು. ವಿವಿಧ ಆನ್ ಲೈನ್ ವೇದಿಕೆಗಳು ಜನರ ಸಂಪರ್ಕಕ್ಕೆ, ಮಾಹಿತಿಗಳನ್ನು ಹಂಚಿಕೊಳ್ಳಲು, ಸಂವಹನಕ್ಕೆ ಸಹಾಯ ಮಾಡುತ್ತದೆ. ಅನೇಕರಿಗೆ ಇದು ಮನೋರಂಜನೆ, ಮಾಹಿತಿ ಮತ್ತು ವೃತ್ತಿಪರ ಅವಕಾಶಗಳನ್ನು ತೋರಿಸಿಕೊಡುತ್ತದೆ. ಆದರೆ ಇದು ಸಾಕಷ್ಟು ಸವಾಲುಗಳನ್ನು ಸೃಷ್ಟಿಸುತ್ತದೆ. ಅದರಲ್ಲೂ ವಿಶೇಷವಾಗಿ ಮಾನಸಿಕ ಆರೋಗ್ಯದ ಕುರಿತು ಚಿಂತಿಸುವಂತೆ ಮಾಡುತ್ತದೆ.

ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ಸಾಕಷ್ಟು ಅವಕಾಶಗಳನ್ನು ಒದಗಿಸಿಕೊಡಬಹುದು. ಅದರ ಜೊತೆಜೊತೆಗೆ ಒತ್ತಡ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್‌ ಬಳಕೆಯಿಂದಾಗುವ ಪ್ರಯೋಜನಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಂಡರೆ ನಾವು ನಮ್ಮ ನಿತ್ಯದ ಬಳಕೆಯ ಮೇಲೆ ಕಡಿವಾಣ ಹಾಕಿಕೊಳ್ಳಬಹುದು.

Mental Health

ಪ್ರಯೋಜನಗಳು

ಸಾಮಾಜಿಕ ಜಾಲತಾಣಗಳು ಸರಿಯಾಗಿ ಬಳಸಿದರೆ ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಇದು ಜನರು ಬೆಂಬಲವನ್ನು ಪಡೆಯಲು, ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು, ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುತ್ತದೆ.

ಸಾಮಾಜಿಕ ಬೆಂಬಲ

ವಿವಿಧ ರೀತಿಯ ಸಮಸ್ಯೆಗಳು, ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು, ಒಂದೇ ರೀತಿಯ ಮನೋಭಾವದವರೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮವು ಅವಕಾಶ ಮಾಡಿಕೊಡುತ್ತದೆ. ವಿವಿಧ ಗ್ರೂಪ್ ಗಳಿಗೆ ಸೇರಿಕೊಂಡು ತಮ್ಮ ಭಾವನೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಅವರ ಸಲಹೆಗಳನ್ನು ಪಡೆಯಬಹುದು.

ಮಾನಸಿಕ ಆರೋಗ್ಯದ ಅರಿವು

ಮಾನಸಿಕ ಆರೋಗ್ಯ ಜಾಗೃತಿಯಲ್ಲಿ ಅಂತರ್ಜಾಲ ಮಹತ್ವದ ಪಾತ್ರ ವಹಿಸಿದೆ. ಅನೇಕ ಅನುಭವಿಗಳು ಇದರಲ್ಲಿ ಜನರಿಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಯಾವುದೇ ಭಯವಿಲ್ಲದೆ ಮುಕ್ತವಾಗಿ ಇಲ್ಲಿ ಸಲಹೆಗಳನ್ನು ಪಡೆಯಬಹುದಾಗಿದೆ.

ವೃತ್ತಿಪರ ಸಹಾಯ

ವಿವಿಧ ಅಪ್ಲಿಕೇಶನ್‌, ವೆಬ್‌ಸೈಟ್‌ಗಳ ಮೂಲಕ ನೇರವಾಗಿ ವೃತ್ತಿಪರ ಆರೋಗ್ಯ ತಜ್ಞರನ್ನು ಭೇಟಿ ಮಾಡಬಹುದು. ಆತಂಕ, ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯಗಳ ಕುರಿತು ತಜ್ಞರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಬಹುದು.

ಸ್ವಯಂ ಅಭಿವ್ಯಕ್ತಿಗೆ ಅವಕಾಶಗಳು

ಸಾಮಾಜಿಕ ಜಾಲತಾಣಗಳು ಸ್ವಯಂ ಅಭಿವ್ಯಕ್ತಿ, ಸೃಜನಶೀಲತೆ ಮತ್ತು ಪ್ರತಿಭೆಯ ಅನ್ವೇಷಣೆಗೆ ವೇದಿಕೆಯನ್ನು ಒದಗಿಸುತ್ತದೆ. ಅನೇಕರು ಇದರಲ್ಲಿ ತಮ್ಮ ಆಲೋಚನೆ, ಕಲೆ, ಸಂಗೀತ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.

ಸಮಾನ ಮನಸ್ಕರೊಂದಿಗೆ ಭೇಟಿ

ಸಾಮಾಜಿಕ ಜಾಲತಾಣವು ವಿವಿಧ ಕ್ರೀಡೆ, ಕಲೆ ಅಥವಾ ಚಟುವಟಿಕೆಯ ಮೂಲಕ ಸಮಾನ ಮನಸ್ಕರನ್ನು ಒಂದು ಮಾಡುತ್ತದೆ. ಬಲವಾದ ಸಾಮಾಜಿಕ ಸಂಪರ್ಕಗಳನ್ನು ನಿರ್ಮಿಸಲು, ಒಂಟಿತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ.

Mental Health

ಅನಾನುಕೂಲಗಳು

ಅತಿಯಾಗಿ ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್‌ ಬಳಕೆ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು.

ಹೋಲಿಕೆ, ಭಯ

ಸಾಮಾಜಿಕ ಮಾಧ್ಯಮವು ಸಾಮಾನ್ಯವಾಗಿ ಜನರ ಜೀವನದ ಪ್ರಮುಖ ಅಂಶಗಳನ್ನು ಮಾತ್ರ ಚಿತ್ರಿಸುತ್ತದೆ. ಇದು ಬಳಕೆದಾರರು ತಮ್ಮನ್ನು ತಾವು ಇತರರೊಂದಿಗೆ ಹೋಲಿಸಿಕೊಳ್ಳುವಂತೆ ಮಾಡುತ್ತದೆ. ಅಸೂಯೆ ಮತ್ತು ಖಿನ್ನತೆಯ ಭಾವನೆಗಳನ್ನು ಉಂಟುಮಾಡುತ್ತದೆ. ನಿರಂತರವಾಗಿ ತನ್ನನ್ನು ಇತರರೊಂದಿಗೆ ಹೋಲಿಸುವುದು ಸ್ವಾಭಿಮಾನವನ್ನು ಕಡಿಮೆ ಮಾಡುತ್ತದೆ.

ಆನ್‌ಲೈನ್ ಕಿರುಕುಳ

ಸಾಮಾಜಿಕ ಮಾಧ್ಯಮವು ಕಿರುಕುಳ, ದ್ವೇಷದ ಭಾವನೆ ಬಿತ್ತರಿಸಲು ಕಾರಣವಾಗಬಹುದು. ಇದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಆತಂಕ, ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳಿಗೆ ಇದು ಕಾರಣವಾಗುತ್ತದೆ.

ಅತಿಯಾದ ಬಳಕೆ

ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯು ಚಟಕ್ಕೆ ಪ್ರೇರೇಪಿಸುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂಟಿತನ, ಆತಂಕ ಮತ್ತು ಖಿನ್ನತೆಯ ಭಾವನೆಗಳು ಮೂಡುವಂತೆ ಮಾಡುತ್ತದೆ. ನಿಜ ಜೀವನದ ಸಂಬಂಧಗಳ ಮೇಲೆ ಪರಿಣಾಮ ಬೀರಿ ಅತೃಪ್ತಿಯ ಭಾವನೆಯನ್ನು ಉಂಟು ಮಾಡುತ್ತದೆ.

ನಿದ್ರೆಗೆ ತೊಂದರೆ

ಅನೇಕರು ತಡರಾತ್ರಿಯವರೆಗೆ ಫೋನ್ ಗಳನ್ನೂ ನೋಡುತ್ತಿರುತ್ತಾರೆ. ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಒತ್ತಡ, ಕಿರಿಕಿರಿ ಮತ್ತು ಅರಿವಿನ ಕುಸಿತಕ್ಕೆ ಇದು ಕಾರಣವಾಗುತ್ತಿದೆ.

WHO Guidelines: ಕ್ಯಾನ್ಸರ್, ಹೃದ್ರೋಗ, ಮಧುಮೇಹದ ಅಪಾಯ ಕಡಿಮೆ ಮಾಡುವುದು ಹೇಗೆ?

ನಕಾರಾತ್ಮಕ ಭಾವನೆ

ಅಂತರ್ಜಾಲವು ಮಾಹಿತಿಗಳು ನಮ್ಮಲ್ಲಿ ನಕಾರಾತ್ಮಕ ಭಾವನೆಯನ್ನು ಉಂಟು ಮಾಡುತ್ತದೆ. ಇದು ಆತಂಕವನ್ನು ಉಂಟು ಮಾಡುತ್ತದೆ. ಅಸಹಾಯಕತೆ ಅಥವಾ ಹತಾಶೆಯ ಭಾವನೆಗಳಿಗೆ ಕಾರಣವಾಗಬಹುದು.