Sunday, 15th December 2024

MFN Status: ಆಪ್ತ ರಾಷ್ಟ್ರ ಸ್ಥಾನ ನಿರಾಕರಿಸಿದ ಸ್ವಿಟ್ಜರ್ಲೆಂಡ್, ಪರಿಣಾಮವೇನು?

swiz

ಹೊಸದಿಲ್ಲಿ: ಸ್ವಿಟ್ಜರ್ಲೆಂಡ್ ಸರ್ಕಾರ ಭಾರತಕ್ಕೆ ನೀಡಿದ್ದ ಆಪ್ತ ರಾಷ್ಟ್ರ ಸ್ಥಾನಮಾನವನ್ನು(MFN Status) ಏಕಪಕ್ಷೀಯವಾಗಿ ಹಠಾತ್‌ ನಿರಾಕರಿಸಿದೆ. (Most favoured nation status-MFN) ಉಭಯ ದೇಶಗಳ ನಡುವೆ ದ್ವಿ ತೆರಿಗೆಯನ್ನು ತಪ್ಪಿಸುವ ಉದ್ದೇಶದ ಒಪ್ಪಂದದ ಅಡಿಯಲ್ಲಿ ಆಪ್ತ ರಾಷ್ಟ್ರ ಸ್ಥಾನವನ್ನು ನೀಡಲಾಗಿತ್ತು. ಇದೀಗ ಸ್ವಿಟ್ಜರ್ಲೆಂಡ್ ನಡೆಯಿಂದ ಅಲ್ಲಿ ಹೂಡಿಕೆ ಮಾಡುವ ಭಾರತೀಯ ಕಂಪನಿಗಳಿಗೆ ಜನವರಿ 1ರಿಂದ ತಮ್ಮ ಆದಾಯದ ಮೇಲೆ ತೆರಿಗೆ 10% ಹೆಚ್ಚಲಿದೆ. ಇದುವರೆಗೆ 5% ತೆರಿಗೆ ಇತ್ತು. ಭಾರತದಲ್ಲಿ ಐಟಿ, ಔಷಧ, ಹಣಕಾಸು ಸೇವಾ ವಲಯದ ಕಂಪನಿಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.

ಏನಿದು ಎಂಎಫ್‌ಎನ್‌ ಸ್ಥಾನಮಾನ?

ಮೋಸ್ಟ್‌ ಫೇವರ್ಡ್‌ ನೇಶನ್‌ ಅಥವಾ ಆಪ್ತ ರಾಷ್ಟ್ರದ ಸ್ಥಾನಮಾನ ಎಂದರೆ, ಎರಡು ದೇಶಗಳ ನಡುವಣ ವಾಣಿಜ್ಯ ಸಹಕಾರ ಒಪ್ಪಂದ. ಇದರಿಂದ ಉಭಯ ದೇಶಗಳಿಗೆ ತೆರಿಗೆ ವಿಚಾರದಲ್ಲಿ ಅನುಕೂಲ ಪರಸ್ಪರ ಸಿಗುತ್ತದೆ. ದ್ವಿ ತೆರಿಗೆಯನ್ನು ತಪ್ಪಿಸಲೂ ಇದು ಸಹಕಾರಿಯಾಗುತ್ತದೆ.

ಹಾಗಾದರೆ ಸ್ವಿಟ್ಜರ್ಲೆಂಡ್ MFN ನಿರಾಕರಿಸಿದ್ದೇಕೆ?

ಸ್ವಿಸ್‌ ಹಣಕಾಸು ಇಲಾಖೆ ಡಿಸೆಂಬರ್‌ 11ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಕಳೆದ ವರ್ಷ ಸುಪ್ರೀಂಕೋರ್ಟ್‌ ಹೊರಡಿಸಿದ್ದ ಆದೇಶವೊಂದರಲ್ಲಿ, ಯಾವುದೇ ದೇಶ ಆರ್ಗನೈಸೇಶನ್‌ ಫಾರ್‌ ಇಕನಾಮಿಕ್‌ ಕೋಪರೇಶನ್‌ ಆಂಡ್‌ ಡೆವಲಪ್‌ಮೆಂಟ್‌ (OECD) ಜತೆ ಸೇರಿದ್ದರೆ ಮತ್ತು ಅದಕ್ಕೂ ಮೊದಲೇ ಭಾರತ ಮತ್ತು ಆ ದೇಶದ ಜತೆಗೆ ತೆರಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರೆ, ಎಂಎಫ್‌ಎನ್‌ ಅಡಿಯಲ್ಲಿರುವ ನಿಯಮಾವಳಿಗಳು ಅನ್ವಯವಾಗುವುದಿಲ್ಲ ಎಂದು ತಿಳಿಸಿತ್ತು. ಒಇಸಿಡಿ ಒಕ್ಕೂಟದಲ್ಲಿ ತೆರಿಗೆ ದರಗಳು ಕಡಿಮೆಯಾಗಿರುತ್ತವೆ.

ಸುಪ್ರೀಂ ಕೋರ್ಟ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ,ಕೆಳ ಹಂತದ ಕೋರ್ಟ್‌ವೊಂದು ನೀಡಿದ್ದ ಅದೇಶವನ್ನು ರದ್ದುಪಡಿಸಿ, ಕೇಂದ್ರ ಸರ್ಕಾರವು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 90ರ ಪ್ರಕಾರ ಅಧಿಸೂಚನೆ ಹೊರಡಿಸದಿದ್ದರೆ, ನೇರವಾಗಿ ಎಂಎಫ್‌ಎನ್‌ ಅಡಿಯಲ್ಲಿ ತೆರಿಗೆ ಇಳಿಸುವ ನಿಬಂಧನೆಯನ್ನು ಅನ್ವಯಿಸಲಾಗದು ಎಂದು ತೀರ್ಪು ಪ್ರಕಟಿಸಿತ್ತು. ಈ ಕೇಸ್‌ನಲ್ಲಿ ಸ್ವಿಟ್ಜರ್ಲೆಂಡ್ ಮೂಲದ ನೆಸ್ಲೆ ಕಂಪನಿಯೂ ಇತ್ತು.‌

ಯುರೋಪಿಯನ್‌ ಫ್ರೀ ಟ್ರೇಡ್‌ ಅಸೋಸಿಯೇಶನ್‌ನ ಸದಸ್ಯ ರಾಷ್ಟ್ರಗಳ ಜತೆಗೆ ಭಾರತ ವ್ಯಾಪಾರ ಒಪ್ಪಂದವನ್ನು ಹೊಂದಿರುವುದರಿಂದ, ಸ್ವಿಟ್ಜರ್ಲೆಂಡ್ ಜತೆಗಿನ ದ್ವಿ ತೆರಿಗೆ ಒಪ್ಪಂದದ ಬಗ್ಗೆ ಮರು ಮಾತುಕತೆಯ ಅಗತ್ಯ ಇದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣ್‌ಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ. ಎಂಎಫ್‌ಎನ್‌ ಸ್ಥಾನಮಾನ ರದ್ದತಿಯಿಂದ ಸ್ವಿಟ್ಜರ್ಲೆಂಡ್‌ನಲ್ಲಿ ಭಾರತೀಯ ಕಂಪನಿಗಳಿಗೆ ತೆರಿಗೆ ಹೊರೆ ಹೆಚ್ಚಳವಾಗಿ ಸಮಸ್ಯೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಏನಿದು ನೆಸ್ಲೆ ಕೇಸ್?‌

ನೆಸ್ಲೆ ಕಂಪನಿಯು ಎಂಎಫ್‌ಎನ್‌ ಅಡಿಯಲ್ಲಿ ತನಗೆ ಭಾರತದಲ್ಲಿ ನಡೆಸಿದ ವ್ಯವಹಾರದಲ್ಲಿ ಸಿಕ್ಕಿದ ಆದಾಯದ ಮೇಲಿನ ತೆರಿಗೆಯನ್ನು ರಿಫಂಡ್‌ ಮಾಡಬೇಕು ಎಂದು ನಿರೀಕ್ಷಿಸಿ ಕೋರ್ಟ್‌ ಮೆಟ್ಟಿಲೇರಿತ್ತು. ಕೆಳ ಹಂತದ ಕೋರ್ಟ್‌ನಲ್ಲಿ ಕಂಪನಿಯ ಪರ ಆದೇಶ ಹೊರಡಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್‌ ಈ ಆದೇಶವನ್ನು ವಜಾಗೊಳಿಸಿತ್ತು. ಕೇಂದ್ರ ಸರ್ಕಾರದ ಅಧಿಸೂಚನೆ ಇಲ್ಲದೆಯೇ ತೆರಿಗೆ ರಿಫಂಡ್‌ಗೆ ಆದೇಶಿಸಲಾಗದು ಎಂದಿತ್ತು.

ಈ ಸುದ್ದಿಯನ್ನೂ ಓದಿ: MFN Of Switzerland: ಭಾರತಕ್ಕೆ ಬಿಗ್‌ ಶಾಕ್‌! ತೆರಿಗೆ MFN ಸ್ಥಾನಮಾನ ಹಿಂಪಡೆದ ಸ್ವಿಟ್ಜರ್ಲೆಂಡ್