Friday, 22nd November 2024

Microsoft: ಪುಣೆಯಲ್ಲಿ 520 ಕೋಟಿ ರೂ. ಮೌಲ್ಯದ 16 ಎಕ್ರೆ ಖರೀದಿಸಿದ ಟೆಕ್ ದೈತ್ಯ ಮೈಕ್ರೋಸಾಫ್ಟ್

Microsoft

ಮುಂಬೈ: ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್ (Microsoft) ಭಾರತದ ಪ್ರಮುಖ ಐಟಿ ಕೇಂದ್ರಗಳಲ್ಲಿ ಒಂದಾದ ಪುಣೆಯಲ್ಲಿ 519.72 ಕೋಟಿ ರೂ.ಗಳ ಗಮನಾರ್ಹ ಹೂಡಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್‌ನ ಹೂಡಿಕೆಗಳು ಹೆಚ್ಚಾಗುತ್ತಿದ್ದು, ಡೇಟಾ ಕೇಂದ್ರಗಳು, ಕಚೇರಿ ಸ್ಥಳಗಳಿಗೆ ವ್ಯಾಪಿಸಿದೆ.

ದಾಖಲೆಯ ಪ್ರಕಾರ, ಮೈಕ್ರೋಸಾಫ್ಟ್‌ನ ಭಾರತೀಯ ಅಂಗವಾದ ಮೈಕ್ರೋಸಾಫ್ಟ್ ಕಾರ್ಪೊರೇಷನ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪುಣೆಯ ಹಿಂಜೇವಾಡಿಯಲ್ಲಿ 66,414.5 ಚದರ ಮೀಟರ್ (16.4 ಎಕ್ರೆ) ಭೂಮಿಯನ್ನು ಖರೀದಿಸಿದೆ. 2024ರ ಆಗಸ್ಟ್‌ನಲ್ಲಿ ಈ ಜಾಗವನ್ನು ನೋಂದಾಯಿಸಲಾಗಿದೆ. ಇಂಡೋ ಗ್ಲೋಬಲ್ ಇನ್ಫೋಟೆಕ್ ಸಿಟಿ ಎಲ್‌ಲೆಲ್‌ಪಿಯಿಂದ ಭೂಮಿಯನ್ನು ಖರೀದಿಸುವ ಒಪ್ಪಂದವನ್ನೂ ಇದು ಒಳಗೊಂಡಿದೆ. ಈ ಒಪ್ಪಂದಕ್ಕೆ 31.18 ಕೋಟಿ ರೂ.ಗಳ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂ.ಗಳ ನೋಂದಣಿ ಶುಲ್ಕ ಪಾವತಿಸಲಾಗಿದೆ.

2022ರಲ್ಲಿ ಮೈಕ್ರೋಸಾಫ್ಟ್ ಕಂಪೆನಿಯು ಪುಣೆಯ ಪಿಂಪ್ರಿ-ಚಿಂಚ್ವಾಡದಲ್ಲಿ 25 ಎಕರೆ ಭೂಮಿಯನ್ನು 328 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಹೈದರಾಬಾದ್‌ನಲ್ಲಿ 48 ಎಕರೆ ಭೂಮಿಯನ್ನು 267 ಕೋಟಿ ರೂ.ಗೆ ಖರೀದಿಸಿತ್ತು. ಈ ಎರಡೂ ಒಪ್ಪಂದಗಳು ಭಾರತದಲ್ಲಿ ಕಂಪೆನಿಯು ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯ ಭಾಗ ಎಂದು ಪರಿಗಣಿಸಲಾಗಿದೆ. ಕಂಪನಿಯ ಡೇಟಾ ಕೇಂದ್ರಗಳ ಜಾಲವು ಈಗಾಗಲೇ ಪುಣೆ, ಮುಂಬೈ ಮತ್ತು ಚೆನ್ನೈಯಲ್ಲಿ ವ್ಯಾಪಿಸಿದೆ.

23,000 ಉದ್ಯೋಗಿಗಳು

ಪ್ರಸ್ತುತ ಭಾರತದಲ್ಲಿರುವ ಕಂಪನಿಯ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಪುಣೆಯ ಕಚೇರಿಗಳಲ್ಲಿ 23,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 2025ರ ವೇಳೆಗೆ ಮೈಕ್ರೋಸಾಫ್ಟ್ 20 ಲಕ್ಷಕ್ಕೂ ಅಧಿಕ ಮಂದಿಗೆ ಎಐ ಮತ್ತು ಡಿಜಿಟಲ್ ಕೌಶಲ್ಯ ಒದಗಿಸುವ ಗುರಿಯನ್ನು ಹೊಂದಿದೆ. ಅಡ್ವಾಂಟಾ (ಐ) ಜಿಇ ಇಂಡಿಯಾ (ADVANTA(I)GE INDIA) ಎಂದು ಕರೆಯಲ್ಪಡುವ ಈ ಯೋಜನೆ ಮೂಲಕ ಸ್ಕಿಲ್ಸ್ ಫಾರ್ ಜಾಬ್ಸ್‌ ಉಪಕ್ರಮದ ಭಾಗವಾಗಿದೆ.

ಈ ಸುದ್ದಿಯನ್ನೂ ಓದಿ: Reliance Retail: ಇಸ್ರೇಲ್‌ನ ಡೆಲ್ಟಾ ಗಲಿಲ್ ಜತೆ ಭಾರತದಲ್ಲಿ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ ರಿಲಯನ್ಸ್ ರೀಟೇಲ್