Saturday, 14th December 2024

ಪಿಕಪ್​ ವ್ಯಾನ್​ಗೆ ಸಿಮೆಂಟ್​ ತುಂಬಿದ ಲಾರಿ ಡಿಕ್ಕಿ

ಮಿಡ್ನಾಪುರ: ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 4 ಮಂದಿ ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಜಿಲ್ಲೆಯ ಖರಗ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬುರಮಳ ಎಂಬಲ್ಲಿ ನಡೆದಿದೆ.

ರಾ.ಹೆದ್ದಾರಿ ಸಂಖ್ಯೆ 16ರಲ್ಲಿ ಹೂವು ತುಂಬುತ್ತಿದ್ದ 407 ಪಿಕಪ್ ವ್ಯಾನ್​ಗೆ ಸಿಮೆಂಟ್ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 5 ಜನ ಸಾವನ್ನಪ್ಪಿದ್ದಾರೆ. ಡೆಬ್ರಾ ಟೋಲ್ ಪ್ಲಾಜಾದಿಂದ ಕೇವಲ 1 ಕಿಮೀ ದೂರದಲ್ಲಿ ಈ ದುರಂತ ಘಟನೆ ನಡೆದಿದೆ.

ಅಪಘಾತದ ಬಗ್ಗೆ ಬೀರೇಂದ್ರನಾಥ್ ಮಾತನಾಡಿ, ಬೆಳಗ್ಗೆ ಬುರಮಳದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 407 ಪಿಕಪ್​ ವ್ಯಾನ್‌ಗೆ 10-12 ಕಾರ್ಮಿಕರು ಹೂ ತುಂಬುವ ಕೆಲಸ ಮಾಡುತ್ತಿದ್ದರು. ಈ ವೇಳೆ, ಏಕಾಏಕಿ ಸಿಮೆಂಟ್ ತುಂಬಿದ್ದ ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮತ್ತೊಬ್ಬರು ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದರು. ನನ್ನ ಸಹೋದರನೂ ಸಹ ಗಾಯಗೊಂಡಿದ್ದಾನೆ. ಅವನನ್ನು ಚಿಕಿತ್ಸೆಗಾಗಿ ಏಮ್ಸ್‌ಗೆ ಕರೆದೊಯ್ಯಲಾಗುತ್ತಿದೆ ಎಂದು ಬೀರೇಂದ್ರ ನಾಥ್ ಎಂಬುವರು ಅಪಘಾತದ ಮಾಹಿತಿ ನೀಡಿದ್ದಾರೆ.

ಅಪಘಾತದ ನಂತರ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡರು. ಬಳಿಕ ಪೊಲೀಸರು ಮತ್ತು ಆಡಳಿತದವರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.