Sunday, 24th November 2024

MiG-29 Fighter Jet: ಆಗ್ರಾದಲ್ಲಿ ವಾಯು ಪಡೆಯ ಮಿಗ್‌ 29 ಯುದ್ಧ ವಿಮಾನ ಪತನ; ಪೈಲಟ್‌ ಅಪಾಯದಿಂದ ಪಾರು

MiG-29 Fighter Jet

ಲಖನೌ: ಭಾರತೀಯ ವಾಯು ಪಡೆ (Indian Air Force)ಯ ಮಿಗ್‌ 29 ಯುದ್ಧ ವಿಮಾನ (MiG-29 Fighter Jet) ಸೋಮವಾರ (ನ. 4) ಹಾರಾಟ ನಡೆಸುತ್ತಿದ್ದಾಗಲೇ ಏಕಾಏಕಿ ಬೆಂಕಿ ಹತ್ತಿಕೊಂಡು ಪತನವಾದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಅದೃಷ್ಟವಶಾತ್‌ ಪೈಲಟ್‌ ತಕ್ಷಣ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.

ಆಗ್ರಾದ ಸೊಂಗಾ ಗ್ರಾಮದ ತೆರೆದ ಮೈದಾನದ ಮೇಲೆ ಹಾರಾಡುತ್ತಿದ್ದ ವಿಮಾನವು ಬೆಂಕಿಗೆ ಆಹುತಿಯಾಗುತ್ತಿರುವುದು ಮತ್ತು ಹೊತ್ತಿ ಉರಿಯುತ್ತಿರುವ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪತನವಾದ ಮಿಗ್‌ 29 ಫೈಟರ್‌ ಜೆಟ್‌ ಸೋಮವಾರ ಪಂಜಾಬ್‌ನ ಅದಾಂಪುರ ವಾಯು ನೆಲೆಯಿಂದ ಟೇಕ್‌ ಆಫ್‌ ಅಗಿ ಆಗ್ರಾದತ್ತ ತೆರಳುತ್ತಿತ್ತು. ಈ ವೇಳೆ ತಾಂತ್ರಿಕ ದೋಷದಿಂದ ಬೆಂಕಿ ಹತ್ತಿಕೊಂಡಿತು ಎಂದು ವರದಿಯೊಂದು ತಿಳಿಸಿದೆ.

ಅಧಿಕಾರಿಗಳು ಹೇಳಿದ್ದೇನು?

ʼʼಭಾರತೀಯ ವಾಯುಪಡೆಯ ಮಿಗ್-29 ಫೈಟರ್‌ ಜೆಟ್‌ ಇಂದು ವಾಡಿಕೆಯ ತರಬೇತಿಯ ಸಮಯದಲ್ಲಿ ಆಗ್ರಾ ಬಳಿ ಅಪಘಾತಕ್ಕೀಡಾಗಿದೆ. ಸುರಕ್ಷಿತವಾಗಿ ಹೊರಬರುವ ಮೊದಲು ಮೈದಾನದಲ್ಲಿ ಜನರಿಲ್ಲ ಎನ್ನುವುದನ್ನು ಫೈಲಟ್‌ ಖಚಿಸಿಪಡಿಸಿಕೊಂಡರು ಮತ್ತು ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಂಡರು. ಅಪಘಾತದ ಕಾರಣವನ್ನು ಕಂಡುಹಿಡಿಯಲು ಇಂಡಿಯನ್‌ ಏರ್‌ ಫೋರ್ಸ್‌ ತನಿಖೆಗೆ ಆದೇಶಿಸಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಿಗ್‌ಗೆ ಬೆಂಕಿ ಹಿಡಿಯುತ್ತಿದ್ದಂತೆ ಪೈಲಟ್‌ ಪ್ಯಾರಚೂಟ್‌ ಬಳಸಿ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ.

ಸೋವಿಯತ್ ರಷ್ಯಾದಲ್ಲಿ ತಯಾರಾದ ಮಿಗ್‌ 29 ಅತ್ಯುತ್ತಮ ಫೈಟರ್ ಜೆಟ್ ಎನಿಸಿಕೊಂಡಿದೆ. ಇದನ್ನು 1987ರಲ್ಲಿ ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. ವರದಿಗಳ ಪ್ರಕಾರ ಪತನವಾದ ಮಿಗ್ -29 ಯುಪಿಜಿ (MiG-29 UPG) ಯುದ್ಧ ವಿಮಾನದ ನವೀಕರಿಸಿದ ಆವೃತ್ತಿಯಾಗಿದೆ.

2 ತಿಂಗಳಲ್ಲಿ ಇದು 2ನೇ ಮಿಗ್ -29 ಅಪಘಾತವಾಗಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದ ಬಾರ್ಮರ್‌ನಲ್ಲಿ ಮಿಗ್ -29 ವಿಮಾನವು ತಾಂತ್ರಿಕ ದೋಷವನ್ನು ಎದುರಿಸಿ ಅಪಘಾತಕ್ಕೀಡಾಗಿತ್ತು. ಈ ವೇಳೆ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು. ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಅಪಘಾತ ಸಂಭವಿಸಿತ್ತು. ಬಾರ್ಮರ್‌ ಪ್ರದೇಶದಲ್ಲಿ ಎಂದಿನಂತೆ ರಾತ್ರಿ ತರಬೇತಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಐಎಎಫ್‌ನ ಮಿಗ್‌-29 ಜೆಟ್‌ನಲ್ಲಿ ನಿರ್ಣಾಯಕ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಜೆಟ್‌ ಪತನದ ಅಂಚಿಗೆ ತಲುಪುತ್ತಿದ್ದಂತೆ ಪೈಲಟ್‌ ಹೊರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದರು.

ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಯುದ್ಧ ವಿಮಾನ

ಪಾಕಿಸ್ತಾನ ಮತ್ತು ಚೀನಾಗಳ ಬೆದರಿಕೆ ಎದುರಿಸುವುದಕ್ಕೆ ಮುಂಜಾಗ್ರತೆಯ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮಿಗ್‌ 29 ಫೈಟರ್‌ ಜೆಟ್‌ಗಳ ಪಡೆಯನ್ನು ಭಾರತ ಕಳೆದ ವರ್ಷ ಆ. 12ರಂದು ನಿಯೋಜಿಸಿತ್ತು. ಮಿಗ್‌ 21 ಫೈಟರ್‌ ಜೆಟ್‌ಗಳ ಬದಲು ಇದನ್ನು ನಿಯೋಜಿಸಲಾಗಿದೆ. ನವೀಕೃತ ಮಿಗ್‌-29 ವಿಮಾನವು ರಾತ್ರಿಯಲ್ಲಿಯೂ ಕಾರ್ಯನಿರ್ವಹಿಸಬಲ್ಲದು. ಗಾಳಿಯಿಂದ ಗಾಳಿಗೆ ಇಂಧನ ತುಂಬುವ ಸಾಮರ್ಥ್ಯದ ಕಾರಣದಿಂದಾಗಿ ದೀರ್ಘ ವ್ಯಾಪ್ತಿಯನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: Supreme Court: ಪಟಾಕಿ ಮೇಲಿನ ನಿಷೇಧದ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲವೇಕೆ? ದಿಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌