Sunday, 15th December 2024

ಅನಿರ್ದಿಷ್ಟ ಉಪವಾಸ ಆರಂಭಿಸಿದ ಸಚಿವೆ ಅತಿಶಿ

ನವದೆಹಲಿ: ದೆಹಲಿ ನೀರಿನ ಬಿಕ್ಕಟ್ಟಿನ ಕುರಿತು ದೆಹಲಿ ಸಚಿವೆ ಅತಿಶಿ ಶುಕ್ರವಾರ ಮಧ್ಯಾಹ್ನ ಅನಿರ್ದಿಷ್ಟ ಉಪವಾಸ ಪ್ರಾರಂಭಿಸಿದ್ದಾರೆ.

ಹರಿಯಾಣ ಸರ್ಕಾರವು ದೆಹಲಿಗೆ ಸಮರ್ಪಕವಾಗಿ ನೀರನ್ನು ನೀಡುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧಿ ಬೋಧಿಸಿದ್ದಾರೆ. ಇಂದಿನಿಂದ ‘ಜಲ ಸತ್ಯಾಗ್ರಹ’ ಆರಂಭಿಸುತ್ತೇನೆ. ಮಧ್ಯಾಹ್ನ 12ರಿಂದ ಭೋಗಲ್, ಜಂಗಪುರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುತ್ತೇನೆ. ದೆಹಲಿಯ ಜನರು ಹರಿಯಾಣದಿಂದ ತಮ್ಮ ಸರಿಯಾದ ನೀರಿನ ಪಾಲನ್ನು ಪಡೆಯು ವವರೆಗೂ ನಾನು ಉಪವಾಸ ಇರುತ್ತೇನೆ” ಎಂದು ಉಪವಾಸ ಆರಂಭಿಸುವ ಮುನ್ನ ಅತಿಶಿ ಎಕ್ಸ್ ನಲ್ಲಿ ಬರೆದಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವರಾದ ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಇತರ ಶಾಸಕರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಜಮಾಯಿಸಿದ್ದು ಅಲ್ಲಿಂದ ರಾಜ್ ಘಾಟ್ ಕಡೆಗೆ ತೆರಳಿದ್ದಾರೆ . ಸಿಎಂ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಕೂಡ ಆಮ್ ಆದ್ಮಿ ಪಕ್ಷದ ನಾಯಕರ ಜೊತೆ ರಾಜ್ ಘಾಟ್ ಗೆ ಬಂದಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ನಿಯಮಿತ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನಂತರ ಎಎಪಿ ಮುಖ್ಯಸ್ಥರಿಗೆ ಹಿನ್ನಡೆಯಾಗಿ, ವಿಚಾರಣಾ ನ್ಯಾಯಾಲಯದ ಆದೇಶವು ಈ ವಿಷಯವನ್ನು ಆಲಿಸುವವರೆಗೆ ಜಾರಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.