ನವದೆಹಲಿ: ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ದುಹೋಮಾ ಅವರು ಡಿ.8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಐಜ್ವಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಲಾಲ್ದುಹೋಮಾ ಅವರು ಇಂದು ರಾತ್ರಿ ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.
ಹೊಸ ಪ್ರಾದೇಶಿಕ ಪಕ್ಷ ಜೋರಂ ಪೀಪಲ್ಸ್ ಮೂವ್ಮೆಂಟ್ (ಝೆಡ್ಪಿಎಂ) ಮಿಜೋರಾಂ ವಿಧಾನಸಭೆಯಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಯ ಹೊಸ್ತಿಲಿಗೆ ಬಂದು ನಿಂತಿದೆ. ಈ ಗೆಲುವಿನ ಮೂಲಕ ಝೆಡ್ಪಿಎಂ ಪಕ್ಷವು, ಸರ್ಕಾರ ರಚನೆಯಲ್ಲಿ ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಮತ್ತು ಕಾಂಗ್ರೆಸ್ 1987ರಿಂದಲೂ ಹೊಂದಿದ್ದ ಪಾರಮ್ಯವನ್ನು ಮುರಿದಿದೆ.
ಸತತ ಎರಡನೆಯ ಬಾರಿಗೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಇದ್ದ ಎಂಎನ್‌ಎಫ್ ಪಕ್ಷವು 10 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ. ಕಾಂಗ್ರೆಸ್ ಪಕ್ಷವು ಒಂದು ಸ್ಥಾನ ಮಾತ್ರ ಗೆದ್ದು, ತೀವ್ರ ಹಿನ್ನಡೆ ಅನುಭವಿಸಿದೆ. ಒಂದು ಕಾಲದಲ್ಲಿ ಮಿಜೋರಾಂ ರಾಜ್ಯವು ಕಾಂಗ್ರೆಸ್ಸಿನ ಭದ್ರ ನೆಲೆಯೂ ಆಗಿತ್ತು.
2018ರಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಎರಡು ಸ್ಥಾನ ಪಡೆದಿದೆ. ಈ ಬಾರಿ ಮೂವರು ಮಹಿಳೆಯರು (ಝೆಡ್‌ಪಿಎಂನಿಂದ ಇಬ್ಬರು, ಎಂಎನ್‌ಎಫ್‌ನಿಂದ ಒಬ್ಬರು) ವಿಧಾನಸಭೆ ಪ್ರವೇಶಿಸಲಿದ್ದಾರೆ.