ನವದೆಹಲಿ: ದೆಹಲಿಯ ಓಖ್ಲಾ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಅಮಾನತುಲ್ಲಾ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಕಾರಣದಿಂದ ಇಡಿ ಖಾನ್ ಮನೆಯನ್ನು ತನಿಖೆಗೆ ಒಳಪಡಿಸಿದೆ. ಈಗಾಗಲೇ ಅಮಾನತುಲ್ಲಾ ಖಾನ್ಗೆ ಸಂಬಂಧಿಸಿದ ದೆಹಲಿ ವಕ್ಫ್ ಬೋರ್ಡ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ವಕ್ಫ್ ಮಂಡಳಿಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದೆ.
ಕಳೆದ ವರ್ಷ ಎಸಿಬಿ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿತ್ತು. ಖಾನ್ನ ಹತ್ತಿರದ ಸಂಬಂಧಿಕರ ನಿವಾಸ ಗಳಲ್ಲಿ ತೀವ್ರ ಶೋಧ ನಡೆಸಿದಾಗ ಕೆಲವು ಹಣದ ವಹಿವಾಟಿನ ವಿವರಗಳು ಮತ್ತು ಡೈರಿಗಳು ದೊರಕಿತ್ತು. ಪತ್ತೆಯಾದ ಡೈರಿಯಲ್ಲಿ ಹವಾಲಾ ಮೂಲಕ ನಡೆದಿರುವ ವಹಿವಾಟಿನ ಖಾತೆಗಳನ್ನು ಕೆಲವು ವಿವರಗಳನ್ನು ಬರೆಯಲಾಗಿತ್ತು ಎಂದು ಆರೋಪಿಸಲಾಗಿದೆ. ಹವಾಲಾ ಮೂಲಕ ವಿದೇಶದಿಂದ ವಹಿವಾಟು ನಡೆಸಿರುವ ಬಗ್ಗೆಯೂ ಉಲ್ಲೇಖವಿದ್ದು, ಇದರ ಬಳಿಕ ಭ್ರಷ್ಟಾಚಾರ ನಿಗ್ರಹ ದಳ ಈ ಕುರಿತಂತೆ ಲಭ್ಯವಾಗಿದ್ದ ಎಲ್ಲ ಮಾಹಿ ತಿಯನ್ನು ಇಡಿಯೊಂದಿಗೆ ಹಂಚಿಕೊಂಡಿತ್ತು.
ಇನ್ನು ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಎಎಪಿ ಸಂಸದ ಸಂಜಯ್ ಸಿಂಗ್ ಮನೆ ಮೇಲೆ ಇಡಿ ದಾಳಿ ನಡೆಸಲಾಗಿತ್ತು. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಅಕ್ಟೋಬರ್ 4 ರಂದು ಸಂಜಯ್ ಸಿಂಗ್ ಮನೆ ಮೇಲೆ ದಾಳಿ ನಡೆಸಿ 8 ಗಂಟೆಗಳ ಕಾಲ ತನಿಖೆ ನಡೆಸಿತ್ತು. ದಿನೇಶ್ ಅರೋರಾ ಎಂಬ ವ್ಯಕ್ತಿಯಿಂದ ಸಂಜಯ್ ಸಿಂಗ್ ಇಡಿ ಕೈಗೆ ಸಿಕ್ಕಿಬಿದ್ದಿದ್ದರು.
ದಿನೇಶ್ ಅರೋರಾ, ಸಂಸದ ಸಂಜಯ್ ಸಿಂಗ್ ಅವರ ಸೂಚನೆ ಮೇರೆಗೆ ದೆಹಲಿಯಲ್ಲಿ ಮುಂಬರುವ ಚುನಾವಣೆಗೆ ಪಕ್ಷದ ನಿಧಿ ಸಂಗ್ರಹಿಸಲು ಹಲವಾರು ರೆಸ್ಟೋರೆಂಟ್ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಇಡಿ ಆರೋಪಿಸಿದೆ.