Friday, 22nd November 2024

14 ಮೊಬೈಲ್ ಸಂದೇಶ ಅಪ್ಲಿಕೇಶನ್‌ಗಳ ನಿಷೇಧ

ವದೆಹಲಿ: ಭಯೋತ್ಪಾದಕ ಚಟುವಟಿಕೆಗಳ ಮೇಲೆ ಕ್ರಮಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಸೋಮವಾರ ಭಯೋತ್ಪಾದಕ ಗುಂಪುಗಳು ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಬೆಂಬಲಿಗರು ಮತ್ತು ಓವರ್ ಗ್ರೌಂಡ್ ವರ್ಕರ್ಸ್ (OGW) ಜೊತೆ ಸಂವಹನ ನಡೆಸಲು ಮತ್ತು ಪಾಕಿಸ್ತಾನದಿಂದ ಸೂಚನೆಗಳನ್ನು ಸ್ವೀಕರಿಸಲು ಬಳಸುತ್ತಿದ್ದ 14 ಮೊಬೈಲ್ ಸಂದೇಶ ಅಪ್ಲಿಕೇಶನ್‌ಗಳನ್ನು ಕೇಂದ್ರವು ನಿಷೇಧಿಸಿದೆ.

ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕ್ರಿಪ್‌ವೈಸರ್, ಎನಿಗ್ಮಾ, ಸೇಫ್‌ಸ್ವಿಸ್, ವಿಕ್ರಮ್, ಮೀಡಿಯಾ ಫೈರ್, ಬ್ರಿಯಾರ್, ಬಿಚಾಟ್, ನಂಡ್‌ ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ ಮತ್ತು ಥ್ರೀಮಾ ಸೇರಿವೆ.

ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ಮತ್ತು ಭಾರತೀಯ ಕಾನೂನು ಗಳನ್ನು ಅನುಸರಿಸದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅವುಗಳನ್ನು ನಿಷೇಧಿಸಲು ವಿನಂತಿಯನ್ನು ಸಂಬಂಧಿಸಿದ ಸಚಿವಾಲಯಕ್ಕೆ ತಿಳಿಸಲಾಗಿದೆ. ಈ ಆಯಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಉನ್ನತ ಅಧಿಕಾರಿಗಳಿಗೆ ಅಧಿಕೃತ ಸಂವಹನದಲ್ಲಿ, ಈ ಅಪ್ಲಿಕೇಶನ್‌ಗಳು ಕಣಿವೆಯಲ್ಲಿ ಭಯೋತ್ಪಾದಕ ಪ್ರಚಾರವನ್ನು ಹರಡುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ ಎಂದು ಎಎನ್‌ಐ ಹೇಳಿದೆ. “ಓವರ್‌ಗ್ರೌಂಡ್ ವರ್ಕರ್ಸ್ (OGWs) ಮತ್ತು ಭಯೋತ್ಪಾದಕರು ತಮ್ಮ ನಡುವೆ ಸಂವಹನ ನಡೆಸಲು ಬಳಸುವ ಚಾನಲ್‌ಗಳನ್ನು ಏಜೆನ್ಸಿಗಳು ಟ್ರ್ಯಾಕ್ ಮಾಡುತ್ತವೆ.

ಈ ವೇಳೆ ಒಂದು ಸಂವಹನವನ್ನು ಪತ್ತೆಹಚ್ಚುವಾಗ ಮೊಬೈಲ್ ಅಪ್ಲಿಕೇಶನ್‌ಗೆ ಭಾರತದಲ್ಲಿ ಪ್ರತಿನಿಧಿಗಳಿಲ್ಲ ಎಂದು ಏಜೆನ್ಸಿಗಳು ಪತ್ತೆ ಮಾಡಿದವು. ಅಪ್ಲಿಕೇಶನ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.