Monday, 16th September 2024

ಬೂಟಾ ಸಿಂಗ್‌ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಂತಾಪ

ನವದೆಹಲಿ: ಕೇಂದ್ರದ ಮಾಜಿ ಗೃಹ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಬೂಟಾ ಸಿಂಗ್‌ ಅವರ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಅನುಭವಿ ಆಡಳಿತಗಾರರಾಗಿದ್ದ ಬೂಟಾ ಸಿಂಗ್‌ ಅವರು ಬಡವರ ಹಾಗೂ ದೀನ-ದಲಿತರ ಗಟ್ಟಿ ಧ್ವನಿಯಾಗಿದ್ದರು. ಅವರ ಕುಟುಂಬ ಸದಸ್ಯರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

‘ಬೂಟಾ ಸಿಂಗ್ ಅವರ ಸಾವಿನೊಂದಿಗೆ ದೇಶವು ನಿಷ್ಠಾವಂತ ನಾಯಕ ಮತ್ತು ಸಾರ್ವಜನಿಕ ಸೇವಕರೊಬ್ಬರನ್ನು ಕಳೆದು ಕೊಂಡಿದೆ. ಅವರು ತಮ್ಮ ಇಡೀ ಜೀವನವನ್ನು ದೇಶದ ಸೇವೆ ಮತ್ತು ಜನರ ಯೋಗಕ್ಷೇಮಕ್ಕಾಗಿ ಮುಡಿಪಾಗಿಟ್ಟಿದ್ದರು. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು’ ಎಂದು ರಾಹುಲ್‌ ಗಾಂಧಿ ಕಂಬನಿ ಮಿಡಿದಿದ್ದಾರೆ.

1962ರಿಂದ 2004ರ ನಡುವಿನ ಅವಧಿಯಲ್ಲಿ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬೂಟಾ ಸಿಂಗ್‌ ಕೇಂದ್ರದಲ್ಲಿ ಗೃಹ ಮತ್ತು ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್‌ ಆಡಳಿತದಲ್ಲಿ ಸಚಿವರಾಗಿದ್ದ ಅವರು 2004ರಿಂದ 2006ರವರೆಗೆ ಬಿಹಾರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

ಕಾಂಗ್ರೆಸ್‌ನ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರಾಗಿದ್ದ ಬೂಟಾ ಸಿಂಗ್‌ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

 

Leave a Reply

Your email address will not be published. Required fields are marked *