Friday, 22nd November 2024

ನೂತನ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್’ರನ್ನು ಅಭಿನಂದಿಸಿದ ಮೋದಿ

ನವದೆಹಲಿ: ಬುಧವಾರ ಅಮೆರಿಕದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಟ್ವೀಟ್‌ಗಳ ಮೂಲಕ ಶುಭ ಹಾರೈಸಿರುವ ಮೋದಿ, ಜಾಗತಿಕ ಶಾಂತಿ ಮತ್ತು ಭದ್ರತೆಗಾಗಿ ಅಮೆರಿಕದೊಂದಿಗೆ ಭಾರತ ಕೆಲಸ ಮಾಡಲಿದ್ದು, ಉಭಯ ದೇಶಗಳ ಸಹಭಾಗಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸಿರುವುದಾಗಿ ತಿಳಿಸಿದ್ದಾರೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೋ ಬೈಡನ್ ಅವರಿಗೆ ಅಭಿನಂದನೆಗಳು. ಭಾರತ-ಅಮೆರಿಕ ಕಾರ್ಯತಂತ್ರ ಸಹಭಾಗಿತ್ವ ಬಲಪಡಿಸಲು ಅವರೊಂದಿಗೆ ಕೆಲಸ ಮಾಡಲು ಕಾಯುತ್ತಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಭಾರತ ಅಮೆರಿಕ ಪಾಲುದಾರಿಕೆಯು ಹಂಚಿಕೆಯಾದ ಮೌಲ್ಯಗಳ ಆಧಾರದಲ್ಲಿದೆ. ನಾವು ಸಮೃದ್ಧ ಮತ್ತು ಬಹುಮುಖಿ ದ್ವಿಪಕ್ಷೀಯ ಕಾರ್ಯಸೂಚಿ, ಬೆಳೆಯುತ್ತಿರುವ ಆರ್ಥಿಕತೆ ಸಂಬಂಧ ಮತ್ತು ಜನರಿಂದ ಜನರ ನಂಟನ್ನು ಹೊಂದಿದ್ದೇವೆ. ಭಾರತ-ಅಮೆರಿಕ ಸಹಭಾಗಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅಧ್ಯಕ್ಷ ಜೋ ಬೈಡನ್ ಅವರ ಜತೆ ಕೆಲಸ ಮಾಡಲು ಬದ್ಧನಾಗಿದ್ದೇನೆ’ ಎಂದಿದ್ದಾರೆ.