ನವದೆಹಲಿ: ಕೋವಿಡ್ ಸಾಂಕ್ರಾಮಿಕವು ಜನರು ಆರೋಗ್ಯದ ಕುರಿತು ಕಾಳಜಿ ಮತ್ತು ನೈಸರ್ಗಿಕ ಉತ್ಪನ್ನಗಳ ಬಗ್ಗೆ ಗಮನಹರಿಸುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಬ್ಬದ ಋತು ಹತ್ತಿರವಾಗುತ್ತಿದೆ. ಜನರು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಮತ್ತು ‘ಲಸಿಕೆ ಸುರಕ್ಷತೆ ವೃತ್ತ’ದಿಂದ ಯಾರೂ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಲಸಿಕೆ ಅಭಿಯಾನದಲ್ಲಿನ ದಾಖಲೆ ಗಳು ಜಾಗತಿಕವಾಗಿ ಚರ್ಚೆಗೆ ಒಳಗಾಗುತ್ತಿವೆ. ನಮ್ಮ ಸರದಿ ಬಂದಾಗ ಲಸಿಕೆ ಪಡೆಯಬೇಕು. ಸುರಕ್ಷತೆಯ ವೃತ್ತದಿಂದ ಯಾರೂ ಹೊರಗುಳಿದಿಲ್ಲ ಎಂದೂ ಖಾತರಿಪಡಿಸಿಕೊಳ್ಳಬೇಕು. ಲಸಿಕೆ ಪಡೆದ ನಂತರವೂ ಮಾರ್ಗಸೂಚಿಗಳನ್ನು ಪಾಲಿಸಬೇಕು. ವಿಶ್ವ ನದಿ ದಿನ ಸಂದರ್ಭವನ್ನು ಉಲ್ಲೇಖಿಸಿ, ನದಿಗಳನ್ನು ಮಾಲಿನ್ಯದಿಂದ ಮುಕ್ತವಾಗಿ ಇರುವಂತೆ ನೋಡಿಕೊಳ್ಳಲು ಸಂಘಟಿತವಾದ ಪ‍್ರಯತ್ನ ಗಳು ನಡೆಯ ಬೇಕು ಎಂದು ಕರೆ ನೀಡಿದರು. ಮಹಾತ್ಮಗಾಂಧಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಖಾದಿ ಉತ್ಪನ್ನಗಳ ದಾಖಲೆ ವಹಿವಾಟು ನಡೆಯು ವಂತೆಯೂ ನೋಡಿ ಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಬರಮತಿ ನದಿಯನ್ನು ಶುಷ್ಕ ವಾತಾವರಣದಿಂದ ಪುನರುಜ್ಜೀವನಗೊಳಿಸಲಾಗಿದೆ. ನದಿಗಳನ್ನು ಪುನಶ್ಚೇತನ ಗೊಳಿಸಲು ಸಾಕಷ್ಟು ಕೆಲಸ ಮಾಡಲಾಗುತ್ತಿದೆ’ ಎಂದು ಮೋದಿ ಹೇಳಿದ್ದಾರೆ. ಎಲ್ಲರೂ ವರ್ಷಕ್ಕೊಮ್ಮೆ ಯಾದರೂ ನದಿಗಳ ದಿನ ಆಚರಿಸಬೇಕು ಎಂದು ಅವರು ಕರೆ ನೀಡಿದರು.
ಮಹಾತ್ಮ ಗಾಂಧಿಯವರು ಸ್ವಚ್ಛತಾ ಅಭಿಯಾನ ಆರಂಭಿಸಿದ್ದರು. ಆರ್ಥಿಕ ಸ್ವಚ್ಛತೆಯ ಬಗ್ಗೆಯೂ ನಾವು ಗಮನಹರಿಸಬೇಕಿದೆ ಎಂದ ಮೋದಿ, ಯುಪಿಐಯಂಥ ತಂತ್ರಜ್ಞಾನಗಳ ಜನಪ್ರಿಯತೆಯನ್ನು ಉಲ್ಲೇಖಿಸಿದರು. ಜಾರ್ಖಂಡ್‌ನಲ್ಲಿ ಮಹಿಳೆಯರು ನಡೆಸುತ್ತಿರುವ ಅಲೋವೆರಾ ಕೃಷಿ ಬಗ್ಗೆ ಮತ್ತು ಅವರ ಬಳಿಯಿಂದ ಸ್ಯಾನಿಟೈಸರ್ ಕಂಪನಿಗಳು ಖರೀದಿ ಮಾಡುತ್ತಿರುವುದರ ಕುರಿತು ಉಲ್ಲೇಖಿಸಿದರು.