Friday, 22nd November 2024

ಪಂಜಾಬ್‌ನ ಫ್ಲೈಓವರ್‌’ನಲ್ಲಿ ಸಿಲುಕಿದ ಮೋದಿ ವಾಹನ: ’ಭದ್ರತಾ ಲೋಪ’ ವೆಂದ ಗೃಹ ಸಚಿವಾಲಯ

ನವದೆಹಲಿ/ ಚಂಡೀಗಡ: ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ಭದ್ರತಾ ಲೋಪ ಉಂಟಾಗಿದ್ದು, ಪಂಜಾಬ್‌ನ ಫ್ಲೈಓವರ್‌ ವೊಂದರ ಮೇಲೆ ಮೋದಿ ಅವರು 20 ನಿಮಿಷ ಸಿಲುಕಿದ ಘಟನೆ ಬುಧವಾರ ನಡೆದಿದೆ.

ಪ್ರಧಾನಿ ಅವರಿಗೆ ಎದುರಾಗಿರುವ ಗಂಭೀರ ಭದ್ರತಾ ಲೋಪದ ಸಂಬಂಧ ಪಂಜಾಬ್‌ ಸರ್ಕಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾ ಲಯ, ಜವಾಬ್ದಾರಿ ಹೊತ್ತು, ಲೋಪದ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಠಿಂಡಾದಲ್ಲಿ ಇಳಿದರು. ಅಲ್ಲಿಂದ ಹುಸೈನಿವಾಲಾದ ಹುತಾತ್ಮರ ರಾಷ್ಟ್ರೀಯ ಸ್ಮಾರಕಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳುವುದು ನಿಗದಿಯಾಗಿತ್ತು. ಮಳೆ ಹಾಗೂ ಮೋಡ ಕವಿದ ವಾತಾವರಣದ ಕಾರಣ ಗಳಿಂದಾಗಿ ಹೆಲಿಕಾಪ್ಟರ್‌ ಮೂಲಕ ಪ್ರಯಾಣಿಸುವುದು ಸಾಧ್ಯವಾಗಲಿಲ್ಲ. ಹೆಲಿಕಾಪ್ಟರ್‌ ಹಾರಾಟಕ್ಕೆ ವಾತಾವರಣ ಅನುಕೂಲಕರವಾಗಿ ಏರ್ಪಡದ ಕಾರಣ, ರಸ್ತೆಯ ಮೂಲಕವೇ ಸ್ಮಾರಕ ಸ್ಥಳಕ್ಕೆ ತೆರಳಲು ನಿರ್ಧರಿಸಲಾಯಿತು. ಪಂಜಾಬ್‌ ಪೊಲೀಸ್‌ ಇಲಾಖೆಯ ಡಿಜಿಪಿ ಅವರಿಂದ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಖಚಿತತೆ ಸಿಗುತ್ತಿದ್ದಂತೆ ಪ್ರಧಾನಿ ಪ್ರಯಾಣ ಮುಂದುವರಿಸಿದ್ದರು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಹುಸೈನಿವಾಲಾದ ರಾಷ್ಟ್ರೀಯ ಸ್ಮಾರಕ ಸ್ಥಳಕ್ಕೆ ಸುಮಾರು 30 ಕಿ.ಮೀ. ದೂರದಲ್ಲಿರುವಾಗ ಪ್ರಧಾನಿ ಅವರು ಭದ್ರತಾ ವಾಹನಗಳು ಫ್ಲೈಓವರ್‌ ಪ್ರವೇಶಿಸು ತ್ತಿದ್ದಂತೆ ಅಲ್ಲಿನ ರಸ್ತೆ ಬಂದ್‌ ಆಗಿರುವುದು ಗಮನಕ್ಕೆ ಬಂದಿದೆ.

ಪ್ರಧಾನ ಮಂತ್ರಿಯ ಭದ್ರತಾ ವ್ಯವಸ್ಥೆಯಲ್ಲಿ ಆಗಿರುವ ಅತ್ಯಂತ ಗಂಭೀರ ಲೋಪ ಇದಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದೆ.

ನಿಯಮಗಳ ಅನುಸಾರ, ರಾಜ್ಯ ಸರ್ಕಾರವು ಪ್ರಯಾಣ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ಪಂಜಾಬ್‌ ಸರ್ಕಾರವು ಹೆಚ್ಚುವರಿ ಭದ್ರತೆ ನಿಯೋಜಿಸುವ ಮೂಲಕ ರಸ್ತೆ ಸಂಚಾರ ಸುಗಮ ವಾಗಿರಲು ನಿಗಾವಹಿಸಬೇಕಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಭದ್ರತಾ ಲೋಪ ಆಗಿರುವುದು ತಿಳಿಯುತ್ತಿದ್ದಂತೆ ಬಠಿಂಡಾ ವಿಮಾನ ನಿಲ್ದಾಣಕ್ಕೆ ಹಿಂದಿರುಗಲು ನಿರ್ಧರಿಸ ಲಾಯಿತು ಎಂದು ತಿಳಿಸಿದೆ.

‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳನ್ನು ತಪ್ಪಿಸುವ ಸಲುವಾಗಿ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರವು ಎಲ್ಲ ರೀತಿಯ ತಂತ್ರಗಳನ್ನು ಹೂಡುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.