Saturday, 14th December 2024

ವಿಪಕ್ಷಗಳಿಗೆ ಪರಿವಾರ ಭಕ್ತಿ ಮಾತ್ರ ತಿಳಿದಿದೆ: ಮೋದಿ ವಾಗ್ದಾಳಿ

ನವದೆಹಲಿ: ಭಾರತೀಯ ಜನತಾ ಪಕ್ಷ ದೇಶ ಭಕ್ತಿಗೆ ಸಮರ್ಪಿತವಾಗಿದೆ, ವಿಪಕ್ಷಗಳಿಗೆ ಪರಿವಾರ ಭಕ್ತಿ ಮಾತ್ರ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತಂತೆ ಕಠಿಣ ನಿಲುವು ತಳೆಯುವಂತೆ ಭಾರತದ ಮೇಲೆ ಜಾಗತಿಕ ಮಟ್ಟದ ಒತ್ತಡ ಹೇರಲಾಗಿತ್ತು. ಆದರೆ ಇಡೀ ಜಗತ್ತು ಎರಡು ಪ್ರತಿಸ್ಪರ್ಧಿ ಬಣಗಳಾಗಿ ವಿಭಜನೆಗೊಂಡ ಸಂದರ್ಭದಲ್ಲಿ ಭಾರತ ದೃಢ ನಿಲುವು ತಳೆದಿದೆ ಎಂದು ಪ್ರಧಾನಿ ಹೇಳಿದರು.

ಯಾವಾಗ ಇಡೀ ಪ್ರಪಂಚ ಎರಡು ಪ್ರತಿಸ್ಪರ್ಧಿಗಳಾಗಿ ವಿಭಜನೆಯಾಯಿತೋ ಆ ಸಂದರ್ಭದಲ್ಲಿಯೂ ಭಾರತ ಮಾನವೀಯತೆ ಬಗ್ಗೆ ದೃಢ ಸಂಕಲ್ಪ ದಿಂದ ಮಾತನಾಡಿತ್ತು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಕ್ಷ ಜಯಭೇರಿ ಗಳಿಸಿರುವ ಹಿನ್ನೆಲೆಯಲ್ಲಿ ಸಂಸ್ಥಾಪನಾ ದಿನಾಚರಣೆ ಬಿಜೆಪಿಗೆ ಹೆಚ್ಚು ಮಹತ್ವಪೂರ್ಣವಾಗಿದೆ ಎಂದರು. ಕೆಲವು ವಾರಗಳ ಹಿಂದಷ್ಟೇ ನಾಲ್ಕು ರಾಜ್ಯಗಳಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಸುಮಾರು ಮೂರು ದಶಕಗಳ ನಂತರ ರಾಜ್ಯಸಭೆಯಲ್ಲಿ ಪಕ್ಷ ನೂರು ಸದಸ್ಯರನ್ನು ತಲುಪಿದೆ ಎಂದು ಪ್ರಧಾನಿ ಹೇಳಿದರು.