Friday, 22nd November 2024

Modi visit to USA : ಮೋದಿ ಅಮೆರಿಕ ಭೇಟಿ ಫಲ; ಭಾರತದಲ್ಲಿ ಸ್ಥಾಪನೆಯಾಗಲಿದೆ ರಾಷ್ಟ್ರೀಯ ಭದ್ರತಾ ಅರೆವಾಹಕ ಫ್ಯಾಬ್ರಿಕೇಷನ್ ಘಟಕ

ನ್ಯೂಯಾರ್ಕ್: ಅಮೆರಿಕ ಭೇಟಿಯಲ್ಲಿರುವ (Modi visit to USA) ಪ್ರಧಾನಿ ಮೋದಿ ಮಹತ್ವದ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಅದರ ಪ್ರಕಾರ ಭಾರತವು ಮೊದಲ ರಾಷ್ಟ್ರೀಯ ಭದ್ರತಾ ಅರೆವಾಹಕ ಫ್ಯಾಬ್ರಿಕೇಷನ್ ಘಟಕ ಪಡೆಯಲಿದೆ. ಇಲ್ಲಿಂದ ಯುಎಸ್ ಸಶಸ್ತ್ರ ಪಡೆಗಳು, ಅದರ ಮಿತ್ರ ಮಿಲಿಟರಿಗಳು ಮತ್ತು ಭಾರತೀಯ ರಕ್ಷಣಾ ಪಡೆಗಳಿಗೆ ಚಿಪ್‌ಗಳು ಪೂರೈಕೆಯಾಗಲಿವೆ. ಈ ಘಟಕವನ್ನು 2025 ರಲ್ಲಿ ಭಾರತದಲ್ಲಿ ಸ್ಥಾಪಿಸಲಾಗುತ್ತದೆ ಮತ್ತು ಅದಕ್ಕೆ ಶಕ್ತಿ ಎಂದು ಹೆಸರಿಡಲಾಗುತ್ತದೆ.

ಡೆಲಾವೇರ್ನಲ್ಲಿ ಯುಎಸ್‌ ಅಧ್ಯಕ್ಷ ಜೋ ಬೈಡನ್ ಅವರೊಂದಿಗಿನ ಪ್ರಧಾನಿ ನರೇಂದ್ರ ಮೋದಿಯವರ ಸಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಒಪ್ಪಂದದ ಪಟ್ಟಿಯಲ್ಲಿ ಭವಿಷ್ಯಕ್ಕಾಗಿ ತಂತ್ರಜ್ಞಾನ ಪಾಲುದಾರಿಕೆಯನ್ನು ಹೆಸರಿಸಲಾಗಿದೆ. ಬೈಡೆನ್‌ ಮತ್ತು ಮೋದಿ ರಾಷ್ಟ್ರೀಯ ಭದ್ರತೆಗಾಗಿ ಸುಧಾರಿತ ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮೇಲೆ ಕೇಂದ್ರೀಕರಿಸಿದ ಹೊಸ ಅರೆವಾಹಕ ಫ್ಯಾಬ್ರಿಕೇಷನ್ ಸ್ಥಾವರ ಸ್ಥಾಪಿಸುವ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇನ್ಫ್ರಾರೆಡ್, ಗ್ಯಾಲಿಯಂ ನೈಟ್ರೈಡ್ ಮತ್ತು ಸಿಲಿಕಾನ್ ಕಾರ್ಬೈಡ್ ಅರೆವಾಹಕಗಳನ್ನು ತಯಾರಿಸುವ ಉದ್ದೇಶದಿಂದ ಘಟಕವನ್ನು ಸ್ಥಾಪಿಸಲಾಗುವುದು . ಅದನ್ನು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮತ್ತು “ಭಾರತ್ ಸೆಮಿ, 3 ಆರ್ಡಿಟೆಕ್ ಮತ್ತು ಯುಎಸ್ ಸ್ಪೇಸ್ ಫೋರ್ಸ್ ನಡುವಿನ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ” ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ : Modi visit to USA : ಅಮೆರಿಕ ಭೇಟಿಯಲ್ಲಿ ಭಾರತಕ್ಕೆ ಸೇರಿದ ಪ್ರಾಚೀನ ವಸ್ತುಗಳನ್ನು ವಾಪಸ್ ಪಡೆದ ಮೋದಿ

ಇಬ್ಬರು ಯುವ ಉದ್ಯಮಿಗಳಾದ ವಿನಾಯಕ್ ದಾಲ್ಮಿಯಾ ಮತ್ತು ವೃಂದಾ ಕಪೂರ್ ನೇತೃತ್ವದ ಭಾರತೀಯ ಸ್ಟಾರ್ಟ್ ಅಪ್ ಅನ್ನು ಯುಎಸ್ ರಾಷ್ಟ್ರೀಯ ಭದ್ರತಾ ಸಂಸ್ಥೆ ನಂಬಿದೆ. ಚಿಪ್‌ಗಳನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಈ ಸಂಸ್ಥೆ ಹೊಂದಿದೆ. ಅದು ಅಮೆರಿಕದ ಭದ್ರತಾ ಮೂಲಸೌಕರ್ಯಗಳಿಗೆ ಮತ್ತು ಯುನೈಟೆಡ್ ಕಿಂಗ್ ಡಮ್ ನಂತಹ ಅದರ ಮಿತ್ರರಾಷ್ಟ್ರಗಳಿಗೆ ಪೂರೈಸುತ್ತದೆ. ಭಾರತದಲ್ಲಿ ರಕ್ಷಣಾ ತಂತ್ರಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸಲು ಹಲವಾರು ಮಹತ್ವದ ಯೋಜನೆಗಳಲ್ಲಿ ಈ ಸ್ಟಾರ್ಟ್‌ ಅಪ್‌ ನೇರವಾಗಲಿದೆ.

ಜೂನ್ 2023 ರಲ್ಲಿ ಪ್ರಧಾನಿ ಮೋದಿ ಯುಎಸ್ ಭೇಟಿ ನೀಡಿದ್ದಾಗ ವೃಂದಾ ಕಪೂರ್ ಅವರು ಮೋದಿ ಮತ್ತು ಬೈಡೆನ್ ಅವರೊಂದಿಗೆ ಟೆಕ್ ಸಿಇಒಗಳ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಈ ಯೋಜನೆಗೆ ಸಹಿ ಹಾಕಲಾಗಿತ್ತು.