Saturday, 23rd November 2024

ಮೋದಿ ನೇತೃತ್ವದ ಸಂಪುಟ ಪುನರ್​ರಚನೆ: ರಿಜಿಜು ಖಾತೆ ಬದಲು

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟಕ್ಕೆ ಮೇಜರ್​ ಸರ್ಜರಿ ನಡೆಸಲಾಗಿದೆ.

ಕಾನೂನು ಸಚಿವರಾಗಿದ್ದ ಕಿರಣ್​ ರಿಜಿಜು ಅವರ ಸ್ಥಾನಕ್ಕೆ ಅರ್ಜುನ್ ರಾಮ್​ ಮೇಘವಾಲ್​ರನ್ನು ನೇಮಕ ಮಾಡಲಾಗಿದೆ. ರಿಜಿಜು ಅವರು ಕಾನೂನು ಖಾತೆಯನ್ನು ಕಳೆದುಕೊಂಡಿ ದ್ದಾರೆ.

ಸುಪ್ರೀಂ ಕೋರ್ಟ್​ನ ಕೊಲಿಜಿಯಂ ವಿರುದ್ಧ ಸಾಲು ಸಾಲಾಗಿ ಟೀಕೆ ಮಾಡುತ್ತಿದ್ದ ಕಾನೂನು ಸಚಿವ ಕಿರಣ್ ರಿಜಿಜು ಅವರ ಖಾತೆಯನ್ನು ಬದಲಿಸಲಾಗಿದೆ. ಅವರಿಗೀಗ ಭೂ ವಿಜ್ಞಾನ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾಗಿದ್ದ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವರಾಗಿ(ಸ್ವತಂತ್ರ) ಬಡ್ತಿ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ಹೊರಡಿಸಿದೆ.

ಪ್ರಧಾನ ಮಂತ್ರಿಯವರ ಸಲಹೆಯಂತೆ ರಾಷ್ಟ್ರಪತಿಗಳಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಚಿವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಖಾತೆ ಬದಲಾವಣೆ ಮಾಡಿದ ಬೆನ್ನಲ್ಲೇ ಟ್ವಿಟರ್​ನಲ್ಲೂ ಅವರೂ ತಮ್ಮ ಖಾತೆಯ ವಿವರ ವನ್ನು ತಿದ್ದಿದ್ದಾರೆ. ಭೂ ವಿಜ್ಞಾನ ಸಚಿವ ಎಂದು ಬದಲಿಸಿಕೊಂಡಿದ್ದಾರೆ.

ಕೇಂದ್ರದ ಕಾನೂನು ಇಲಾಖೆ ಮಾಜಿ ಸಚಿವರಾದ ಕಿರಣ್​ ರಿಜಿಜು ಅವರು ಇದಕ್ಕೂ ಮೊದಲು ಸುಪ್ರೀಂ ಹೈಕೋರ್ಟ್​ಗಳಿಗೆ ನ್ಯಾಯಾಧೀಶರ ನೇಮಕ ಮಾಡುವ ​ಕೊಲಿಜಿಯಂ ಪದ್ಧತಿಯ ವಿರುದ್ಧ ಸಮರವೇ ಸಾರಿದ್ದರು. ಸುಪ್ರೀಂಕೋರ್ಟ್​ನ ಕೊಲಿಜಿಯಂ ವಿವಿಧ ಹೈಕೋರ್ಟ್​ಗಳಿಗೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿದ್ದನ್ನು ಇವರು ಟೀಕಿಸಿದ್ದರು.