ನವದೆಹಲಿ: 2029ರವರೆಗೂ ಮೋದಿಯವರೇ ಸರ್ಕಾರವನ್ನು ಮುನ್ನಡೆಸಲಿದ್ದು, ಮುಂಬರುವ ಚುನಾವಣೆಯಲ್ಲಿಯೂ ಇರಲಿದ್ದಾರೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ಶುಭಸುದ್ದಿ ಅಲ್ಲವೇ ಅಲ್ಲ ಬಿಡಿ’ ಎಂದು ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಇದೇ ಸೆ.17 ಬಂದ್ರೆ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ. ಅಂದಮೇಲೆ ಮೋದಿ ಮುಂದಿನ ಬಾರಿಯೂ ಪ್ರಧಾನಿ ಆಗೋದಿಲ್ಲ. ಹಾಗಿದ್ರೆ, ಅವರ ಬದಲಿಗೆ ಅಮಿತ್ ಶಾ ಆಗ್ತಾರೆ ಅನಿಸುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲೇವಡಿ ಮಾಡಿದ್ದರು.
ಲೋಕಸಭಾ ಚುನಾವಣೆ ಕುರಿತು ಜನರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇವರು ನಮ್ಮನ್ನು ಕೇಳ್ತಾರೆ ಇಂಡಿಯಾ ಮೈತ್ರಿಕೂಟ ಗೆದ್ದರೆ ಯಾರನ್ನು ಪ್ರಧಾನಿ ಮಾಡುತ್ತೀರಿ ಎಂದು. ಆದರೆ, ನನ್ನ ಪ್ರಶ್ನೆ, ಬಿಜೆಪಿ ಗೆಲುವು ಸಾಧಿಸಿದರೆ, ಯಾರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುತ್ತದೆ ಅಂತ?
ಪಾರ್ಟಿಯಲ್ಲಿರುವ ನಾಯಕರು 75 ಆಗುತ್ತಿದ್ದಂತೆ ಅವರಿಗೆ ನಿವೃತ್ತಿ ಘೋಷಣೆ ಮಾಡುವ ಪ್ರಕ್ರಿಯೆ ಇವರಲ್ಲಿದೆ.
ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಮತ್ತು ಯಶ್ವಂತ್ ಸಿನ್ಹಾ ಇವರೆಲ್ಲರೂ ನಿವೃತ್ತಿ ಪಡೆದರು. ಈಗ ಮೋದಿ ಸರದಿ. ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆ ಆದರೆ, ಬಿಜೆಪಿ ಮೊದಲು ಯೋಗಿ ಆದಿತ್ಯನಾಥ್ರನ್ನು ತೆಗೆದುಹಾಕಿ, ಆನಂತರ ಅಮಿತ್ ಶಾ ಅವರನ್ನು ದೇಶದ ಪ್ರಧಾನಿಯಾಗಿ ಮಾಡುತ್ತದೆ ಎಂದು ಹೇಳಿದ್ದರು.
‘ಈ ದೇಶದ ಮೂಲೆ ಮೂಲೆಯಲ್ಲಿರುವ ಜನರು ನರೇಂದ್ರ ಮೋದಿ ಅವರೊಂದಿಗೆ ನಿಂತಿದ್ದಾರೆ. ಇಂಡಿಯಾ ಮೈತ್ರಿಕೂಟದ ಎಲ್ಲಾ ನಾಯಕರಿಗೂ ನಾವು 400 ಸೀಟ್ಗಳನ್ನು ಗೆಲುತ್ತೇವೆ ಮತ್ತು ಮೂರನೇ ಬಾರಿಗೆ ಮೋದಿಯವರು ಪ್ರಧಾನಿ ಆಗುತ್ತಾರೆ ಎಂಬ ವಿಷಯ ಚೆನ್ನಾಗಿಯೇ ಗೊತ್ತಿದೆ. ಅದನ್ನು ಮರೆಮಾಚಲು ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದರು.