Friday, 22nd November 2024

Mohan Bhagwat: ಕೋಲ್ಕತಾ ವೈದ್ಯೆ ಹತ್ಯೆಯ ಅಪರಾಧಿಗಳ ರಕ್ಷಿಸುವ ಯತ್ನ ನಾಚಿಕೆಗೇಡಿನ ಸಂಗತಿ; ಮೋಹನ್ ಭಾಗವತ್ ಕಿಡಿ

Mohan Bhagwat

ಮುಂಬೈ: ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತುಅಪರಾಧಿಗಳನ್ನು ರಕ್ಷಿಸುವ ಪ್ರಯತ್ನ ನಾಚಿಕೆಗೇಡಿನ ಸಂಗತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (Rashtriya Swayamsevak Sangh)ದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದರು. ಅಪರಾಧ, ರಾಜಕೀಯ ಮತ್ತು ವಿಷಕಾರಿ ಸಂಸ್ಕೃತಿಯು ಸಮಾಜವನ್ನು ಹಾಳು ಮಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಜತೆಗೆ ಹಿಂದೂಗಳು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಇರಬೇಕು ಕರೆ ನೀಡಿದರು. ಮಹಾರಾಷ್ಟ್ರದ ನಾಗಪುರದಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ʼʼಬಹುಪಕ್ಷೀಯ ಪ್ರಜಾಪ್ರಭುತ್ವದಲ್ಲಿ ಪರಸ್ಪರ ಸಾಮರಸ್ಯ, ಹೆಮ್ಮೆ ಮತ್ತು ರಾಷ್ಟ್ರದ ಸಮಗ್ರತೆಗಿಂತ ಕ್ಷುಲ್ಲಕ ಸ್ವಾರ್ಥ ಹಿತಾಸಕ್ತಿಗಳು ಹೆಚ್ಚು ಮುಖ್ಯವಾಗಿದೆ. ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಈ ಪ್ರಮುಖ ಅಂಶಗಳನ್ನು ದ್ವಿತೀಯವೆಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನಗಳು ರಾಷ್ಟ್ರೀಯ ಹಿತಾಸಕ್ತಿಗಿಂತ ದೊಡ್ಡದಾಗಿದೆ. ಒಂದು ಪಕ್ಷದ ಬೆಂಬಲಕ್ಕೆ ನಿಲ್ಲುವುದು ಮತ್ತು ಪರ್ಯಾಯ ರಾಜಕೀಯದ ಹೆಸರಿನಲ್ಲಿ ವಿನಾಶಕಾರಿ ಕಾರ್ಯಸೂಚಿಯನ್ನು ಮುನ್ನಡೆಸುವುದು ಅಪಾಯಕಾರಿʼʼ ಎಂದು ಅವರು ಹೇಳಿದರು.

“ಕಳೆದ ಕೆಲವು ವರ್ಷಗಳಲ್ಲಿ ವರ್ಧಿತ ವಿಶ್ವಾಸಾರ್ಹತೆಯೊಂದಿಗೆ ಭಾರತವು ಪ್ರಮುಖ ದೇಶವಾಗಿ ಬದಲಾಗಿದೆ. ಒಂದು ದೇಶವು ತನ್ನ ಜನರ ರಾಷ್ಟ್ರೀಯ ಗುಣಲಕ್ಷಣದಿಂದಾಗಿ ಶ್ರೇಷ್ಠವಾಗುತ್ತದೆ. ಆರ್‌ಎಸ್‌ಎಸ್‌ ತನ್ನ ಶತಮಾನೋತ್ಸವ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಈ ವರ್ಷ ಮಹತ್ವದ್ದಾಗಿದೆ” ಎಂದು ಅವರು ಬಣ್ಣಿಸಿದರು.

ʼʼಭರವಸೆಗಳು ಮತ್ತು ಆಕಾಂಕ್ಷೆಗಳ ಜತೆಗೆ ಸವಾಲುಗಳು ಮತ್ತು ಸಮಸ್ಯೆಗಳೂ ಭಾರತವನ್ನು ಕಾಡುತ್ತಿದೆ. ಅಹಲ್ಯಾಬಾಯಿ ಹೋಳ್ಕರ್, ದಯಾನಂದ ಸರಸ್ವತಿ, ಬಿರ್ಸಾ ಮುಂಡಾ ಮತ್ತು ಇನ್ನೂ ಅನೇಕ ವ್ಯಕ್ತಿಗಳಿಂದ ನಾವು ಸ್ಫೂರ್ತಿ ಪಡೆಯಬೇಕು. ಅವರು ಧರ್ಮ, ಸಂಸ್ಕೃತಿ ಮತ್ತು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು” ಎಂದು ಮೋಹನ್ ಭಾಗವತ್ ತಿಳಿಸಿದರು.

“ಅಪರಾಧಿಗಳನ್ನು ನಿಯಂತ್ರಿಸುವುದು ಮತ್ತು ಶಿಕ್ಷಿಸುವುದು ಆಡಳಿತದ ಕೆಲಸ. ಆದರೆ ಅವರು ಬರುವವರೆಗೆ ಸಮಾಜವು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಶಕ್ತಿ ಮತ್ತು ಬಲವರ್ಧನೆಯೇ ದಬ್ಬಾಳಿಕೆಗೆ ಮದ್ದು ಎಂಬುದನ್ನು ಹಿಂದೂ ಸಮಾಜ ತಿಳಿದುಕೊಳ್ಳಬೇಕು. ನಾವು ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಬೇಕಾದರೆ ಬಲಶಾಲಿಯಾಗಿರಬೇಕು. ವಿವಿಧ ಜಾತಿಗಳು ಅಥವಾ ಸಮುದಾಯಗಳ ನಾಯಕರು ಒಟ್ಟಿಗೆ ಕುಳಿತು ದೇಶದ ಒಳಿತಿಗಾಗಿ ಗುಂಪುಗಳು ಒಟ್ಟಾಗಿ ಏನು ಮಾಡಬಹುದು? ದುರ್ಬಲ ವರ್ಗಗಳನ್ನು ಮೇಲೆತ್ತಲು ನಾವೆಲ್ಲರೂ ಒಟ್ಟಾಗಿ ಕೈಗೊಳ್ಳಬೇಕಾದ ಮಾರ್ಗಗಳು ಯಾವುವು? ಎಂಬ ಬಗ್ಗೆ ನಿಯಮಿತವಾಗಿ ಯೋಚಿಸಿದರೆ ವಿಭಜಕ ಶಕ್ತಿಗಳು ಯಶಸ್ವಿಯಾಗುವುದಿಲ್ಲʼʼ ಎಂದು ಅವರಿ ಅಭಿಪ್ರಾಯಪಟ್ಟರು.

“ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ದಂಗೆಯು ತಕ್ಷಣದ ಮತ್ತು ಸ್ಥಳೀಯ ಕಾರಣಗಳನ್ನು ಹೊಂದಿದೆ. ಈ ವೇಳೆ ಅಲ್ಲಿ ವಾಸಿಸುತ್ತಿದ್ದ ಹಿಂದೂ ಸಮುದಾಯದ ಮೇಲೆ ಅಪ್ರಚೋದಿತ ಕ್ರೂರ ದೌರ್ಜನ್ಯ ಪುನರಾವರ್ತನೆಯಾಯಿತು. ಆದರೆ ಈ ಬಾರಿ ಆ ದೌರ್ಜನ್ಯಗಳನ್ನು ಪ್ರತಿಭಟಿಸಿ ಅಲ್ಲಿನ ಹಿಂದೂ ಸಮುದಾಯವು ಸಂಘಟಿತವಾಯಿತು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಮನೆಗಳಿಂದ ಹೊರಬಂದರುʼʼ ಎಂದು ತಿಳಿಸಿದರು. “ಎಲ್ಲಿಯವರೆಗೆ ಈ ದಬ್ಬಾಳಿಕೆಯ ಮೂಲಭೂತವಾದಿ ಸ್ವಭಾವವು ಅಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಹಿಂದೂಗಳು ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ಖಡ್ಗ ನೇತಾಡುತ್ತದೆ. ಅದಕ್ಕಾಗಿಯೇ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ಒಳನುಸುಳುವಿಕೆ ಮತ್ತು ಅದರಿಂದ ಉಂಟಾಗುವ ಜನಸಂಖ್ಯೆಯ ಅಸಮತೋಲನವು ಸಾಮಾನ್ಯ ಜನರಲ್ಲಿಯೂ ಕಳವಳ ಉಂಟು ಮಾಡುತ್ತದೆʼʼ ಎಂದು ಹೇಳಿದರು.

ಸಂವಿಧಾನ ಪಾಲನೆಗೆ ಕರೆ

ʼʼಸಂವಿಧಾನದ ಪೀಠಿಕೆಯ ವಾಕ್ಯವನ್ನು ಮನಸ್ಸಿನಲ್ಲಿರಿಸಿಕೊಂಡು ಸಂವಿಧಾನ ಸೂಚಿಸಿದ ಕರ್ತವ್ಯಗಳು ಹಾಗೂ ಕಾನೂನಿನ ಸೂಕ್ತ ಪಾಲನೆಯನ್ನು ಎಲ್ಲರೂ ಮಾಡಬೇಕು. ಸಣ್ಣದು ದೊಡ್ಡದು ಎಂಬ ಭೇದವಿಲ್ಲದೆ ಎಲ್ಲ ವಿಚಾರಗಳಲ್ಲೂ ನಾವು ಈ ನಿಯಮಗಳ ಪಾಲನೆ ಮಾಡಬೇಕು. ಕಾನೂನುಗಳ ಪಾಲನೆಯನ್ನು ಅಕ್ಷರಶಃ ಹಾಗೂ ಭಾವಶಃ ಕೈಗೊಳ್ಳಬೇಕುʼʼ ಎಂದು ಮೋಹನ್ ಭಾಗವತ್ ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ: Rahul Gandhi: ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ವಿರುದ್ಧ ಅಮೆರಿಕದಲ್ಲಿ ರಾಹುಲ್‌ ಆಕ್ರೋಶ; ದೇಶದ್ರೋಹಿಗಳಿಗೆ ಇದೆಲ್ಲಾ ಅರ್ಥ ಆಗಲ್ಲ ಎಂದು ಬಿಜೆಪಿ ತಿರುಗೇಟು