ಭೋಪಾಲ್: ಮಧ್ಯಪ್ರದೇಶದ ನೂತನ ಸಿಎಂ ಮೋಹನ್ ಯಾದವ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಭೋಪಾಲ್‌ನ ಮೋತಿಲಾಲ್ ನೆಹರು ಕ್ರೀಡಾಂಗಣದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ.ಪಟೇಲ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಜೊತೆಗೆ ಉಪ ಮುಖ್ಯಮಂತ್ರಿಗಳಾಗಿ ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವ್ರಾ ಕೂಡ ಪ್ರತಿಜ್ಞೆ ಪಡೆದರು. ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಧಾನಸಭೆ ಸ್ಪೀಕರ್ ಆಗಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ಸಿಎಂ ಶಿವರಾಜ್ ಸಿಂಗ್ ಔಹಾಣ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಿಎಂ ಮೋಹನ್ ಯಾದವ್ ಅವರ ಶಪಥ ಕಾರ್ಯಕ್ರಮಕ್ಕೆ ಉಜ್ಜಯಿನಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಯಾದವರ ಸಂಖ್ಯೆ ಅಧಿಕವಾಗಿದ್ದರಿಂದ ಅದೇ ಸಮುದಾಯದ ನಾಯಕನಿಗೆ ಪಕ್ಷ ಮಣೆ ಹಾಕಿದೆ.
ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಹಾಜರಿದ್ದರು. ಕಾರ್ಯಕ್ರಮದ ವೇದಿಕೆ ಹತ್ತುವ ವೇಳೆ ಜನರತ್ತ ಕೈ ಬೀಸಿದರು. ಜನರು ದೊಡ್ಡದಾಗಿ ಘೋಷಣೆ ಕೂಗಿದರು. ಸತತ ನಾಲ್ಕು ಅವಧಿಗೆ ಸಿಎಂ ಆಗಿದ್ದ ಚೌಹಾಣ್, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು.
ಹೈಕಮಾಂಡ್ ನಿರ್ದೇಶನದಂತೆ, ಚೌಹಾಣ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಮೋಹನ್ ಯಾದವ್ ಅವರನ್ನು ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ವಾಗಿ ಆಯ್ಕೆ ಮಾಡಲಾಗಿತ್ತು.