Sunday, 15th December 2024

ಮಧ್ಯಪ್ರದೇಶದ ನೂತನ ಸಿಎಂ ಮೋಹನ್​ ಯಾದವ್​ ಪ್ರಮಾಣ ವಚನ ಸ್ವೀಕಾರ

ಭೋಪಾಲ್: ಮಧ್ಯಪ್ರದೇಶದ ನೂತನ ಸಿಎಂ ಮೋಹನ್​ ಯಾದವ್​ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಭೋಪಾಲ್‌ನ ಮೋತಿಲಾಲ್ ನೆಹರು ಕ್ರೀಡಾಂಗಣದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ.ಪಟೇಲ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಜೊತೆಗೆ ಉಪ ಮುಖ್ಯಮಂತ್ರಿಗಳಾಗಿ ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವ್ರಾ ಕೂಡ ಪ್ರತಿಜ್ಞೆ ಪಡೆದರು. ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಧಾನಸಭೆ ಸ್ಪೀಕರ್ ಆಗಲಿದ್ದಾರೆ.

ಸಿಎಂ ಮೋಹನ್​ ಯಾದವ್​ ಅವರ ಶಪಥ ಕಾರ್ಯಕ್ರಮಕ್ಕೆ ಉಜ್ಜಯಿನಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಯಾದವರ ಸಂಖ್ಯೆ ಅಧಿಕವಾಗಿದ್ದರಿಂದ ಅದೇ ಸಮುದಾಯದ ನಾಯಕನಿಗೆ ಪಕ್ಷ ಮಣೆ ಹಾಕಿದೆ.

ಹೈಕಮಾಂಡ್ ನಿರ್ದೇಶನದಂತೆ, ಚೌಹಾಣ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಮೋಹನ್​ ಯಾದವ್ ಅವರನ್ನು ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ವಾಗಿ ಆಯ್ಕೆ ಮಾಡಲಾಗಿತ್ತು.