Wednesday, 20th November 2024

Mohini Dey: ಎ.ಆರ್‌.ರೆಹಮಾನ್‌ ವಿಚ್ಛೇದನ ಬೆನ್ನಿಗೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ತಂಡದ ಸದಸ್ಯೆ ಮೋಹಿನಿ ಡೇ

Mohini Dey

ಮುಂಬೈ: ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ (AR Rahman) ಅವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಪತ್ನಿ ಸೈರಾ ಬಾನು ಅವರಿಗೆ ಡಿವೋರ್ಸ್‌ ನೀಡುವುದಾಗಿ ಪ್ರಕಟಿಸಿದ್ದು, ಈ ಮೂಲಕ 29 ವರ್ಷಗಳ ಸಂಬಂದಕ್ಕೆ ಅಂತ್ಯ ಹಾಡಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ. ಇದರ ನಡುವೆ ಬುಧವಾರ (ನ. 20) ಎ.ಆರ್‌.ರೆಹಮಾನ್‌ ಅವರ ತಂಡದ ಸದಸ್ಯೆ, ಗಿಟಾರ್‌ ವಾದಕಿ ಮೋಹಿನಿ ಡೇ (Mohini Dey) ಅವರು ತಮ್ಮ ಪತಿ, ಸಂಗೀತ ಸಂಯೋಜಕ ಮಾರ್ಕ್‌ ಹಾರ್ಟ್ಸುಚ್‌ನಿಂದ ದೂರವಾಗುತ್ತಿರುವುದಾಗಿ ಘೋಷಿಸಿದ್ದಾರೆ.

ಈ ದಂಪತಿ ಇನ್‌ಸ್ಟಾಗ್ರಾಮ್‌ ಮೂಲಕ ತಮ್ಮ ವಿಚ್ಛೇದನ ಸುದ್ದಿಯನ್ನು ಪ್ರಕಟಿಸಿದ್ದಾರೆ. ಇಬ್ಬರು ಪರಸ್ಪರ ಚರ್ಚೆ ನಡೆಸಿ, ಒಮ್ಮತದಿಂದ ಈ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಮೋಹಿನಿ ಡೇ ಹೇಳಿದ್ದೇನು?

29 ವರ್ಷದ ಮೋಹಿನಿ ಡೇ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ʼʼಭಾರವಾದ ಹೃದಯದಿಂದ ನಾನು ಮತ್ತು ಮಾರ್ಕ್‌ ದೂರವಾಗುತ್ತಿರುವುದನ್ನು ಪ್ರಕಟಿಸುತ್ತಿದ್ದೇನೆ. ಇದು ಪರಸ್ಪರ ಚರ್ಚಿಸಿ ತೆಗೆದುಕೊಂಡ ನಿರ್ಧಾರ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ನಾವು ದಾಂಪತ್ಯ ಜೀವನದಿಂದ ಬೇರೆ ಬೇರೆಯಾದರೂ ಉತ್ತಮ ಸ್ನೇಹಿತರಾಗಿ ಮುಂದುವರಿಯಲಿದ್ದೇವೆʼʼ ಎಂದು ತಿಳಿಸಿದ್ದಾರೆ. ಬೇರೆ ಆಗಿದ್ದರೂ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಜತೆಯಾಗಿ ಕೆಲಸ ಮುಂದುವರಿಸುವುದಾಗಿ ಮೋಹಿನಿ ಹೇಳಿದ್ದಾರೆ. ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮತ್ತು ವದಂತಿ ಹರಡದಂತೆ ಅವರು ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ಬೇಸ್‌ ಗಿಟಾರ್‌ ಪ್ಲೇಯರ್‌ ಆಗಿರುವ ಮೋಹಿನಿ ಅವರು ವಿಶ್ವಾದ್ಯಂತ 40ಕ್ಕೂ ಹೆಚ್ಚು ಶೋಗಳಲ್ಲಿ ರೆಹಮಾನ್‌ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅವರು ತಮ್ಮ ಮೊದಲ ಆಲ್ಬಂ ಹೊರ ತಂದಿದ್ದಾರೆ. ಗಾನ್‌ ಬಾಂಗ್ಲಾದ ವಿಂಡ್‌ ಆಫ್‌ ಚೇಂಜ್‌ಮೂಲಕ ಜನಪ್ರಿಯರಾಗಿರುವ ಇವರು 11 ವರ್ಷದಿಂದಲೇ ಕಾರ್ಯಕ್ರಮ ನೀಡಲು ಆರಂಭಿಸಿದ್ದರು.

ಶಾಕ್‌ನಿಂದ ಇನ್ನೂ ಹೊರ ಬಂದಿಲ್ಲ ಫ್ಯಾನ್ಸ್‌

ಮಂಗಳವಾರ (ನ. 19) ಎ.ಆರ್‌.ರೆಹಮಾನ್‌ ತಮ್ಮ ಡಿವೋರ್ಸ್‌ ವಿಚಾರವನ್ನು ಬಹಿರಂಗಪಡಿಸಿದ್ದರು. ಎ.ಆರ್.ರೆಹಮಾನ್ 1995ರಲ್ಲಿ ಸೈರಾ ಬಾನು ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. “ಮದುವೆಯಾದ ಸುಮಾರು 29 ವರ್ಷಗಳ ನಂತರ ಸೈರಾ ತನ್ನ ಪತಿ ಎ.ಆರ್.ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರ ಸಂಬಂಧದಲ್ಲಿ ಕಂಡುಬಂದ ಭಾವನಾತ್ಮಕ ಒತ್ತಡದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ಪರಸ್ಪರರ ಬಗ್ಗೆ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಯ ಮಧ್ಯೆ ಆಳವಾದ ಕಂದಕ ಸೃಷ್ಟಿಯಾಗಿದೆ. ಸೈರಾ ಅವರ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕುʼʼ ಎಂದು ಅವರ ವಕೀಲರು ಮನವಿ ಮಾಡಿದ್ದರು. ಸೈರಾ ಅವರು ಗುಜರಾತ್‌ ಮೂಲದವರು. ತಮ್ಮ ನೆಚ್ಚಿನ ಸಂಗೀತ ನಿರ್ದೇಶಕನ ದಾಂಪತ್ಯದಲ್ಲಿ ಬಿರುಕು ಬಿಟ್ಟ ಸಂಗತಿಯನ್ನು ಅಭಿಮಾನಿಗಳು ಅರಗಿಸಿಕೊಳ್ಳುವ ಮುನ್ನ ಮತ್ತೊಂದು ಆಘಾತ ಎದುರಾಗಿದೆ.

ಈ ಸುದ್ದಿಯನ್ನೂ ಓದಿ: AR Rahman Divorce: ಸಂಗೀತ ಮಾಂತ್ರಿಕನ ವೈವಾಹಿಕ ಬದುಕಿನಲ್ಲಿ ಬಿರುಕು, ವಿಚ್ಛೇದನದ ಬಗ್ಗೆ ಮಕ್ಕಳು ಹೇಳಿದ್ದೇನು?