ಬೆಂಗಳೂರು: ದಿನ ಕಳೆದಂತೆ ಜೀವನ ವೆಚ್ಚ ಹೆಚ್ಚಾಗುತ್ತಿದೆ. ಸಂಬಳ ಎಷ್ಟಿದ್ದರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲಕ್ಕೆ ಕೈಚಾಚಲೇ ಬೇಕಾಗುತ್ತದೆ. ಅದರಲ್ಲಿಯೂ ಕೃಷಿ ಚಟುವಟಿಕೆ, ಮನೆ ನಿರ್ಮಾಣ, ವಾಹನ ಖರೀದಿ ಮುಂತಾದ ಸಂದರ್ಭದಲ್ಲಿ ಮಧ್ಯಮ ವರ್ಗದವರು ಸಾಲದ ಮೊರೆ ಹೋಗಲೇ ಬೇಕು ಎನ್ನುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈಗಿನ ಕಾಲದಲ್ಲಿ ಸಾಲ ಮಾಡದೇ ಜೀವಿಸುತ್ತೇನೆ ಎಂದರೆ ಬಹುಶಃ ಅದು ಅಸಾಧ್ಯ. ಆದರೆ ಬ್ಯಾಂಕ್ನಿಂದ ಪರ್ಸನಲ್ ಲೋನ್ (Personal loan) ತೆಗೆದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಹಾಗೋ ಹೀಗೋ ಮಾಡಿ ಸಾಲ ಮಂಜೂರಾದರೂ ಅದಕ್ಕಿರುವ ಬಡ್ಡಿದರ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುವುದೇ ಚಿನ್ನದ ಮೇಲಿನ ಸಾಲ (Gold Loan). ಇದರ ವೈಶಿಷ್ಟ್ಯತೆಯ ಬಗ್ಗೆ ಮಾಹಿತಿ ಇಲ್ಲಿದೆ (Money Tips).
ಪ್ರಸ್ತುತ ಅತ್ಯಂತ ಸುಲಭ ಹಾಗೂ ಕಡಿಮೆ ವೆಚ್ಚದ ಸಾಲಗಳಲ್ಲಿ ಗೋಲ್ಡ್ ಲೋನ್ ಕೂಡ ಒಂದು. ಇದಕ್ಕೆ ಪರ್ಸನಲ್ ಲೋನ್ಗೆ ಇರುವಂತೆ ಸಿಬಿಲ್ ಸ್ಕೋರ್ನ ಹಂಗಿಲ್ಲ, ದೀರ್ಘ ಸಮಯಗಳ ಕಾಲ ಕಾಯಬೇಕಾಗೂ ಇಲ್ಲ. ದಾಖಲೆ ಪತ್ರ ಹೊಂದಿಸುವ ಧಾವಂತವೂ ಬೇಡ. ಹೀಗಾಗಿ ಗೋಲ್ಡ್ ಲೋನ್ ಜನಪ್ರಿಯವಾಗುತ್ತಿದೆ. ಆಭರಣವಾಗಿ ಮಾತ್ರವಲ್ಲದೆ ಚಿನ್ನ ಆದಾಯದವಾಗಿಯೂ, ಕಷ್ಟಕಾಲದಲ್ಲಿ ಸಾಲ ಒದಗಿಸುವ ಮೂಲವಾಗಿಯೂ ನೆರವಾಗುತ್ತದೆ. ಒಟ್ಟಿನಲ್ಲಿ ಚಿನ್ನದ ಮೇಲಿನ ಸಾಲ ದುಡ್ಡಿನ ಆವಶ್ಯಕತೆಯನ್ನು ನೆರವೇರಿಸುತ್ತದೆ. ಚಿನ್ನವನ್ನು ಒತ್ತೆ ಇಟ್ಟು ಸುಲಭವಾಗಿ ಸಾಲ ಪಡೆಯಬಹುದು. ಇತರ ಸಾಲಗಳಿಗೆ ಹೋಲಿಸಿದರೆ ಇದಕ್ಕೆ ಬಡ್ಡಿಯೂ ಕಡಿಮೆ ಎನ್ನುವುದು ವಿಶೇಷ.
ಏನಿದು ಗೋಲ್ಡ್ ಲೋನ್?
ಈ ಸಾಲವನ್ನು ಪಡೆಯಲು ನಿಮ್ಮ ಚಿನ್ನದ ಆಭರಣಗಳನ್ನು ಅಡ ಇಡವಿಟ್ಟರೆ ಸಾಕು. ಬ್ಯಾಂಕ್ ಅವುಗಳನ್ನು ಸುರಕ್ಷಿತವಾಗಿ ತೆಗೆದಿರಿಸುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ನೀವು ಅಡವಿಟ್ಟ ಚಿನ್ನವನ್ನು ಹಿಂಪಡೆಯಬಹುದು. ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಸಾಲಕ್ಕೆ ಕಡಿಮೆ ಬಡ್ಡಿದರ ವಿಧಿಸಲಾಗುತ್ತದೆ. ಇದು ಸಾಮಾನ್ಯವಾಗಿ ಶೇ. 7ರಷ್ಟು ವಾರ್ಷಿಕ ದರದಲ್ಲಿ ಪ್ರಾರಂಭವಾಗುತ್ತದೆ. ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿ (Non-banking Financial Company)ಗಳು 2 ಕೋಟಿ ರೂ.ಗಳವರೆಗೆ ಚಿನ್ನದ ಸಾಲವನ್ನು ಒದಗಿಸುತ್ತವೆ. ಸಾಲ 2ರಿಂದ 3 ದಿನಗಳಲ್ಲಿ ಮಂಜೂರಾಗುತ್ತದೆ. ನಿಮ್ಮ ಚಿನ್ನದ ಮೌಲ್ಯದ ಶೇ. 75ರಷ್ಟು ಸಾಲ ದೊರೆಯುತ್ತದೆ.
ಗೋಲ್ಡ್ ಲೋನ್ನ ಪ್ರಯೋಜನಗಳು
ಕಡಿಮೆ ಬಡ್ಡಿದರ: ಗೃಹ ಸಾಲ, ವೈಯಕ್ತಿಕ ಸಾಲ ಅಥವಾ ಇತರ ಯಾವುದೇ ಸಾಲಕ್ಕೆ ಹೋಲಿಸಿದರೆ ಬಡ್ಡಿದರ ಕಡಿಮೆ.
ತ್ವರಿತ ಮಂಜೂರು: ಸಾಲದಾತರು ತ್ವರಿತವಾಗಿ ಸಾಲ ಮಂಜೂರು ಮಾಡುತ್ತವೆ. ಮೊದಲೇ ಹೇಳಿದಂತೆ ಅರ್ಜಿ ಸಲ್ಲಿಸಿ 2-3 ದಿನಗಳಲ್ಲಿ ಸಾಲ ಮಂಜೂರಾಗುತ್ತದೆ. ಹೆಚ್ಚಿನ ದಾಖಲೆ ಹಾಜರುಪಡಿಸಬೇಕಾಗಿಲ್ಲ ಎನ್ನುವುದು ಇನ್ನೊಂದು ವಿಶೇಷ. ನೀವು ಕೆವೈಸಿ ದಾಖಲೆ ಹಾಜರುಪಡಿಸಿದರೆ ಸಾಕು.
ಮರುಪಾವತಿಗೆ ಬಹು ಆಯ್ಕೆ: ಸಾಲ ಮರುಪಾವತಿಗೆ ಬಹು ಆಯ್ಕೆಯೂ ಲಭ್ಯ. ಅಂದರೆ ನೀವು ಬಡ್ಡಿಮೊತ್ತವನ್ನು ಆರಂಭದಲ್ಲೇ ಪಾವತಿಸಿ ಬಳಿಕ ಉಳಿದ ಮೊತ್ತವನ್ನು ಕಟ್ಟಬಹುದು. ಜತೆಗೆ ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ, ನಾಲ್ಕು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ ಮರುಪಾವತಿಸುವ ಆಯ್ಕೆಯೂ ಇದೆ.
ಪ್ರೋಸಸಿಂಗ್ ಫೀಸ್: ಚಿನ್ನದ ಸಾಲ ನೀಡುವ ಪ್ರಕ್ರಿಯೆಗಳಿಗೆ ಬ್ಯಾಂಕು ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯವಾಗಿ 500 ರೂ.ಯಿಂದ 1,OOO ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ. ಒಡವೆ ಗುಣಮಟ್ಟ ಪರೀಕ್ಷೆಯ ವೆಚ್ಚವೂ ಇದರಲ್ಲಿ ಒಳಗೊಂಡಿರುತ್ತದೆ.
ಆದಾಯದ ಪ್ರಮಾಣ ಪತ್ರ ಅಗತ್ಯವಿಲ್ಲ: ಗೋಲ್ಡ್ ಲೋನ್ ಪಡೆಯಲು ನಿಮ್ಮ ಆದಾಯ ಪ್ರಮಾಣ ಪತ್ರ ಹಾಜರುಪಡಿಸಬೇಕಾಗಿಲ್ಲ.
ಈ ಸುದ್ದಿಯನ್ನೂ ಓದಿ: Money Tips: ನೀವು Personal Loanಗೆ ಅಪ್ಲೈ ಮಾಡುವ ಮುನ್ನ ತಿಳಿದಿರಲೇಬೇಕಾದ ಅಂಶಗಳಿವು…