ನವದೆಹಲಿ: ಕರೋನಾ ಭೀತಿಯ ನಡುವೆಯೂ ಜುಲೈನಲ್ಲಿ ನಿಗದಿತ ಸಮಯಕ್ಕೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಹೇಳಿದ್ದಾರೆ.
ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಮೂರು ಸಂಸತ್ತಿನ ಅಧಿವೇಶನಗಳನ್ನು ಮೊಟಕುಗೊಳಿಸಲಾಗಿದ್ದು, ಕಳೆದ ವರ್ಷದ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿತ್ತು. ಕಳೆದ ವರ್ಷ ಜುಲೈನಲ್ಲಿ ಆರಂಭವಾಗಬೇಕಿದ್ದ ಮುಂಗಾರು ಅಧಿವೇಶನ ವನ್ನು ಸೆಪ್ಟೆಂಬರ್ ನಲ್ಲಿ ಆರಂಭವಾಗಿತ್ತು. ಈ ವರ್ಷದ ಮುಂಗಾರು ಅಧಿವೇಶನವನ್ನು ನಡೆಸುವ ವಿಧಾನಗಳನ್ನು ಇನ್ನೂ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜುಲೈನಿಂದ ಪ್ರಾರಂಭವಾಗುವ ಸಂಸತ್ ಅಧಿವೇಶನವನ್ನು ಅದರ ಸಾಮಾನ್ಯ ವೇಳಾಪಟ್ಟಿಯ ಪ್ರಕಾರ ನಡೆಸಲಾಗುವುದು ಎಂಬ ಭರವಸೆಯಿದೆ ಎಂದು ಜೋಶಿ ತಿಳಿಸಿದ್ದಾರೆ.
ಬಹುತೇಕ ಸಂಸದರು, ಲೋಕಸಭಾ ಮತ್ತು ರಾಜ್ಯಸಭೆಯ ಸಿಬ್ಬಂದಿ, ಕಾರ್ಯದರ್ಶಿಗಳು ಮತ್ತಿತರ ಪಾಲುದಾರರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರುವುದರಿಂದ ಜುಲೈನಲ್ಲಿ ಮುಂಗಾರು ಅಧಿವೇಶನ ನಡೆಯುವ ಬಗ್ಗೆ ಅಧಿಕಾರಿಗಳಿಗೆ ವಿಶ್ವಾಸವಿದೆ.