Tuesday, 22nd October 2024

Vikash Yadav: ಯಾರಿವರು ಅಮೆರಿಕದ ಮೋಸ್ಟ್ ವಾಂಟೆಡ್ ವಿಕಾಸ್‌ ಯಾದವ್?

Most Wanted List

ಅಮೆರಿಕದ ಪ್ರಜೆ (American Citizen), ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಗುರುಪಂತ್ ಸಿಂಗ್ ಪನ್ನುನ್ (Gurpant Singh Pennun) ಹತ್ಯೆ ಯತ್ನ (Vikash Yadav) ಪ್ರಕರಣಕ್ಕೆ ಸಂಬಂಧಿಸಿ ಭಾರತ ಸರ್ಕಾರದ ಗುಪ್ತಚರ ವಿಭಾಗದ ಮಾಜಿ ಉದ್ಯೋಗಿ ವಿಕಾಸ್ ಯಾದವ್‌ ಅವರನ್ನು ಅಮೆರಿಕವು ಮೋಸ್ಟ್ ವಾಂಟೆಡ್ ಪಟ್ಟಿಗೆ (Most Wanted List) ಸೇರಿಸಿದೆ. ಗುರುಪಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡುವ ಸಂಚನ್ನು ರೂಪಿಸುವಲ್ಲಿ ವಿಕಾಸ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್‌ನ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಆರೋಪಿಸಿದೆ.

ಗುರುಪಂತ್ ಸಿಂಗ್ ಪನ್ನುನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕವು ವಿಕಾಸ್ ಯಾದವ್ ಗುರುತನ್ನು ಬಹಿರಂಗಪಡಿಸಿದ ಬಳಿಕ, ಅವರು ಇನ್ನು ಮುಂದೆ ಭಾರತದ ಸರ್ಕಾರದ ಉದ್ಯೋಗಿಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ದೃಢಪಡಿಸಿದೆ. ವಿಕಾಸ್ ವಿರುದ್ಧ ಅಮೆರಿಕದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಕಾಸ್ ಯಾದವ್ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ. ಹಾಗಾಗಿ ಆತ ಇನ್ನು ಮುಂದೆ ಭಾರತ ಸರ್ಕಾರದ ಉದ್ಯೋಗಿಯಲ್ಲ ಎಂಬುದನ್ನು ಖಚಿತಪಡಿಸುವುದಾಗಿ ಹೇಳಿದರು.

ವಿಕಾಸ್ ಯಾದವ್ ಯಾರು?

ಮೂಲತಃ ಹರಿಯಾಣದವರಾದ ವಿಕಾಸ್ ಯಾದವ್ ಭಾರತೀಯ ಪ್ರಜೆಯಾಗಿದ್ದಾರೆ. ಅಮೆರಿಕದ ಎಫ್‌ಬಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಅವರು 53 ವರ್ಷದ ನಿಖಿಲ್ ಗುಪ್ತಾ ಎಂಬಾತನೊಂದಿಗೆ ಸೇರಿ ಗುರುಪಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಭಾರತದಲ್ಲಿರುವ ನಿಖಿಲ್ ನೊಂದಿಗೆ ಸಂವಹನ ನಡೆಸುವಾಗ ಯಾದವ್‌ ತಮ್ಮನ್ನು ಅಮಾನತ್ ಎಂದು ಪರಿಚಯಿಸಿಕೊಂಡಿದ್ದರು ಎಂದು ಎಫ್‌ಬಿಐ ಆರೋಪಿಸಿದೆ. ಈ ಹಿಂದೆ ನಿಖಿಲ್ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಿ ಅಮೆರಿಕದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಬಳಿಕ ಇದೀಗ ವಿಕಾಸ್ ಯಾದವ್ ವಿರುದ್ಧ ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್‌ ಕೋರ್ಟ್‌ನಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.

ಭಾರತ ಸರ್ಕಾರದ ಉದ್ಯೋಗಿಯಾಗಿರುವ ಯಾದವ್, ತಮ್ಮ ಮಾಹಿತಿಯನ್ನು ಗೌಪ್ಯವಾಗಿ ಇರಿಸಿ, ಅಮೆರಿಕದಲ್ಲಿ ಭಾರತ ಸರ್ಕಾರವನ್ನು ಬಹಿರಂಗವಾಗಿ ಟೀಕಿಸುವವರ ಹತ್ಯೆಯ ಸಂಚನ್ನು ರೂಪಿಸುತ್ತಿದ್ದಾರೆ ಎಂದು ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಆಡಳಿತಾಧಿಕಾರಿ ಅನ್ನೆ ಮಿಲ್‌ಗ್ರಾಮ್ ಆರೋಪಿಸಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ನ್ಯೂಯಾರ್ಕ್ ವಿಭಾಗದ ಡ್ರಗ್ ಎನ್‌ಫೋರ್ಸ್‌ಮೆಂಟ್ ಟಾಸ್ಕ್ ಫೋರ್ಸ್, ನ್ಯೂಯಾರ್ಕ್ ಸ್ಟೇಟ್ ಪೊಲೀಸ್ ಮತ್ತು ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆ ನಡೆಸುತ್ತಿದೆ.

ಕಳೆದ ವರ್ಷ ನಿಖಿಲ್ ಗುಪ್ತಾ ವಿರುದ್ಧ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಪನ್ನುನ್‌ನ ಹತ್ಯೆ ಸಂಚು ರೂಪಿಸಿರುವ ಆರೋಪ ಮಾಡಲಾಗಿತ್ತು. ಇದರಲ್ಲಿ ಗುಪ್ತಾ ಮಾತ್ರ ಭಾಗಿಯಾಗಿಲ್ಲ. ವಿಕಾಸ್ ಯಾದವ್ ಕೂಡ ಆರೋಪಿ ಎಂದು ಘೋಷಿಸಲಾಗುವುದು. ಭಾರತದಿಂದ ಸಂಚು ರೂಪಿಸಿ, ಹತ್ಯೆಗೆ ವ್ಯಕ್ತಿಗಳ ನೇಮಕಕ್ಕೆ ಗುಪ್ತಾಗೆ ವಿಕಾಸ್ ನಿರ್ದೇಶನ ನೀಡಿದ್ದರು ಎಂದು ಅಟಾರ್ನಿ ಡೇಮಿಯನ್ ವಿಲಿಯಮ್ಸ್ ಹೇಳಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ 2023ರಲ್ಲಿ ಯಾದವ್, ಗುಪ್ತಾ ಸೇರಿದಂತೆ ಇನ್ನು ಕೆಲವರು ಒಟ್ಟಾಗಿ ಮೂಲತಃ ಭಾರತೀಯನಾಗಿದ್ದ ಅಮೆರಿಕ ಪ್ರಜೆ, ವಕೀಲ ಮತ್ತು ರಾಜಕೀಯ ಕಾರ್ಯಕರ್ತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಅವರು ವಿಲಿಯಮ್ಸ್‌ ವಾದಿಸುತ್ತಿದ್ದಾರೆ. ಯಾದವ್ ಭಾರತದ ವಿದೇಶಿ ಗುಪ್ತಚರ ಸೇವೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದಲ್ಲಿ ಭಾರತ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಭದ್ರತೆ ನಿರ್ವಹಣೆ ಮತ್ತು ಗುಪ್ತಚರ ಜವಾಬ್ದಾರಿ ಹೊಂದಿದ್ದ ಯಾದವ್ ಹಿರಿಯ ದರ್ಜೆಯ ಅಧಿಕಾರಿಯೂ ಹೌದು.

Most Wanted List

ಯಾದವ್-ಗುಪ್ತಾ ಸೇರಿಕೊಂಡು ಕೊಲೆ ಸಂಚು

ಅಮೆರಿಕದ ಎಫ್‌ಬಿಐ ಮಾಹಿತಿ ಪ್ರಕಾರ 2023ರ ಮೇ ತಿಂಗಳಲ್ಲಿ ಅಮೆರಿಕ ಪ್ರಜೆಯ ಹತ್ಯೆಯನ್ನು ಯೋಜಿಸಲು ನಿಖಿಲ್ ಗುಪ್ತಾನನ್ನು ಯಾದವ್ ನೇಮಿಸಿಕೊಂಡಿದ್ದರು. ಭಾರತೀಯ ಪ್ರಜೆಯಾಗಿರುವ ಗುಪ್ತಾ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿದ್ದಾನೆ ಎನ್ನಲಾಗಿದೆ. ಯಾದವ್‌ನಿಂದ ಸೂಚನೆ ಸಿಕ್ಕಿದ ಬಳಿಕ ಗುಪ್ತಾ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ಕೊಲ್ಲಲು ಒಬ್ಬ ಕ್ರಿಮಿನಲ್‌ಗೆ ಗುತ್ತಿಗೆ ನೀಡಿದ್ದ ಎನ್ನಲಾಗಿದೆ. ಇದಕ್ಕಾಗಿ 1 ಲಕ್ಷ ಡಾಲರ್ ಪಾವತಿಸಲು ಒಪ್ಪಿಕೊಂಡು 2023ರ ಜೂನ್ 9ರಂದು ಮುಂಗಡವಾಗಿ 15 ಸಾವಿರ ಡಾಲರ್ ಪಾವತಿಸಿದ್ದರು. ಕೊಲೆ ಮಾಡಬೇಕಿರುವ ವ್ಯಕ್ತಿಯ ದೈನಂದಿನ ಚಟುವಟಿಕೆ, ನ್ಯೂಯಾರ್ಕ್ ನಗರದಲ್ಲಿರುವ ವಿಳಾಸ, ಫೋನ್ ನಂಬರ್ ಸೇರಿದಂತೆ ಅನೇಕ ಮಾಹಿತಿಯನ್ನು ಕೊಲೆಗಾರನಿಗೆ ನೀಡಲಾಗಿತ್ತು. ಈ ಕುರಿತು ನಿರಂತರವಾಗಿ ಗುಪ್ತಾ ಮತ್ತು ಯಾದವ್ ನಡುವೆ ಸಂವಹನ ನಡೆಯುತ್ತಿತ್ತು ಎಂದು ಅಮೆರಿಕ ನ್ಯಾಯಾಂಗ ಇಲಾಖೆ ಹೇಳಿದೆ.

ಗುಪ್ತಾ ಮತ್ತು ಯಾದವ್ ವಿರುದ್ಧ ಆರೋಪಗಳೇನು?

ವಿಕಾಸ್ ಯಾದವ್ ಮತ್ತು ನಿಖಿಲ್ ಗುಪ್ತಾ ವಿರುದ್ಧ ಕೊಲೆ ಸಂಚು ಆರೋಪವಿದೆ. ಇದರಿಂದ ಈ ಇಬ್ಬರಿಗೂ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಜೊತೆಗೆ ಗರಿಷ್ಠ ದಂಡವನ್ನು ವಿಧಿಸಬಹುದಾಗಿದೆ. ಕೊಲೆಗೆ ಪಿತೂರಿ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

Self Harming: ಬೆಡ್‌ಶೀಟ್‌ ಕೊಡಲ್ಲ ಎಂದ ಅಕ್ಕ, ಆತ್ಮಹತ್ಯೆ ಮಾಡಿಕೊಂಡ ತಂಗಿ

ಅಮೆರಿಕದ ಕಾನೂನಿನ ಪ್ರಕಾರ ಫೆಡರಲ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆಯನ್ನು ನಿರ್ಧರಿಸುತ್ತಾರೆ. ದೋಷಾರೋಪಣೆ ಪಟ್ಟಿ ಕೇವಲ ಆರೋಪವಾಗಿರುತ್ತದೆ. ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಅವರು ನಿರಪರಾಧಿಗಳೆಂದೇ ಪರಿಗಣಿಸಲಾಗುತ್ತದೆ. ಈ ಪ್ರಕರಣವು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ಮೇಲೂ ಪ್ರಭಾವ ಬೀರುವುದರಿಂದ ಇದನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.