Sunday, 24th November 2024

ಶಿರ ಇಲ್ಲದ ಭಾರತದ ಭೂಪಟ ಪ್ರಕಟ: ಕ್ಷಮೆಯಾಚಿಸಿದ ಮೋಟೋಜಿಪಿ

ಗ್ರೇಟರ್ ನೋಯ್ಡಾ: ಮೋಟೋ ರೇಸ್​ ಸಂಸ್ಥೆ ದೊಡ್ಡ ಎಡವಟ್ಟು ಮಾಡಿದೆ. ಭಾರತ್ ಜಿಪಿ ಎಂದು ಮರುನಾಮಕರಣ ಮಾಡಲಾದ ಇಂಡಿಯನ್ ಆಯಿಲ್ ಗ್ರ್ಯಾನ್​ ಪ್ರಿ ಆಫ್ ಇಂಡಿಯಾ ವಿವಾದಕ್ಕೆ ಗುರಿಯಾಗಿದೆ.

ಲೈವ್‌ಸ್ಟ್ರೀಮ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಲ್ಲದ್ದ ಭಾರತದ ನಕ್ಷೆಯನ್ನು ನೋಡಿ ಮೋಟೋಜಿಪಿಯ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಶಿರವೇ ಇಲ್ಲದ ಭಾರತದ ಭೂಪಟವನ್ನು ಪ್ರಕಟಿಸಿ ಮೋಟೋ ಜಿಪಿ ಆಯೋಜಕರು ಎಡವಟ್ಟು ಮಾಡುಕೊಂಡಿದ್ದಾರೆ. ಇದು ವಿವಾದಕ್ಕೆ ಕಾರಣ ವಾಗುತ್ತಿದ್ದಂತೆ ಮೋಟೋಜಿಪಿ ತರಾತುರಿಯಲ್ಲಿ ತನ್ನ ತಪ್ಪನ್ನು ಸರಿಪಡಿಸಿದೆ. ಬಳಿಕ ಎಲ್ಲಾ ಭಾರತೀಯ ವೀಕ್ಷಕರಲ್ಲಿ ಕ್ಷಮೆ ಕೋರಿದೆ.

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೋಟೋಜಿಪಿ ರೇಸ್ ಆಗಿರುವ ಮೋಟೋಜಿಪಿ ಭಾರತ್ ಅಥವಾ ದಿ ಗ್ರ್ಯಾಂಡ್ ಪ್ರಿಕ್ಸ್ ಆಫ್ ಇಂಡಿಯಾ ಸೆ.22 ರಿಂದ ಸೆ. 24ರವರೆಗೆ ನಡೆಯಲಿದೆ.

ಡೋರ್ನಾ ಸ್ಪೋರ್ಟ್ಸ್ ಸಹಯೋಗದಲ್ಲಿ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಆಯೋಜಿಸಿದ್ದು, MotoGP, Moto2, ಮತ್ತು Moto3 ವಿಭಾಗಗಳಲ್ಲಿ ಭಾಗವಹಿಸುವ 41 ತಂಡಗಳು ಮತ್ತು 82 ರೈಡರ್‌ಗಳೊಂದಿಗೆ ರೋಮಾಂಚಕ ಪ್ರದರ್ಶನ ನಡೆಯಲಿದೆ. ಫ್ರಾನ್ಸೆಸ್ಕೊ ಬಾಗ್ನಾಯಾ, ಮಾರ್ಕ್ ಮಾರ್ಕ್ವೆಜ್, ಮಾರ್ಕೊ ಬೆಝೆಚಿ, ಬ್ರಾಡ್ ಬೈಂಡರ್, ಜ್ಯಾಕ್ ಮಿಲ್ಲರ್ ಮತ್ತು ಜಾರ್ಜ್ ಮಾರ್ಟಿನ್ ಅವರಂತಹ ಹೆಸರಾಂತ ರೇಸರ್‌ಗಳು ಇದರಲ್ಲಿ ಭಾಗಿಯಾಗಿದ್ದಾರೆ.