Friday, 22nd November 2024

Mpox In India: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಪ್ರಕರಣ ಪತ್ತೆ; ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ

Mpox In India

ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಅಪಾಯಕಾರಿ ಮಂಕಿಪಾಕ್ಸ್‌ (Monkeypox) ಪ್ರಕರಣ ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 2ಕ್ಕೆ ಏರಿದೆ. ಯುಎಇಯಿಂದ ಹಿಂದಿರುಗಿದ 29 ವರ್ಷದ ಎರ್ನಾಕುಲಂನ ವ್ಯಕ್ತಿಯಲ್ಲಿ ಈ ಸೋಂಕು ಕಂಡು ಬಂದಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಶುಕ್ರವಾರ ದೃಢಪಡಿಸಿದ್ದಾರೆ (Mpox In India).

“ಸೋಂಕಿತ ವ್ಯಕ್ತಿ ಇತ್ತೀಚೆಗೆ ವಿದೇಶದಿಂದ ರೋಗಲಕ್ಷಣಗಳೊಂದಿಗೆ ರಾಜ್ಯಕ್ಕೆ ಆಗಮಿಸಿದ್ದರು. ಪ್ರಸ್ತುತ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆʼʼ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ. ಸೆ. 18ರಂದು ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್‌ ಪ್ರಕರಣ ದಾಖಲಾಗಿತ್ತು.

ತಕ್ಷಣ ವರದಿ ಮಾಡಿ

ರೋಗ ಲಕ್ಷಣಗಳನ್ನು ಹೊಂದಿರುವವರು ತಕ್ಷಣ ಚಿಕಿತ್ಸೆ ಪಡೆಯಬೇಕೆಂದು ಅಧಿಕಾರಿಗಳು ಕರೆ ನೀಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಶುಕ್ರವಾರ ಉನ್ನತ ಮಟ್ಟದ ಸಭೆಯನ್ನೂ ನಡೆಸಲಾಯಿತು. ರೋಗಿಯ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ʼʼಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಸೋಂಕು ತಡೆಗಟ್ಟಲು ಮತ್ತು ಚಿಕಿತ್ಸೆಗಾಗಿ ಹೊಸ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದುʼʼ ಎಂದು ವೀಣಾ ಜಾರ್ಜ್‌ ಹೇಳಿದ್ದಾರೆ.

ಭಾರತದಲ್ಲಿ ತಿಂಗಳೊಳಗೆ 3ನೇ ಪ್ರಕರಣ

ಇದು ಭಾರತದಲ್ಲಿ ಒಂದು ತಿಂಗಳೊಳಗೆ ಕಂಡುಬಂದ ಮಂಕಿಪಾಕ್ಸ್‌ನ 3ನೇ ಪ್ರಕರಣ ಎನಿಸಿಕೊಂಡಿದೆ. ಸೆಪ್ಟೆಂಬರ್ 9ರಂದು ಹರಿಯಾಣದ ಹಿಸಾರ್‌ನ 26 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇನ್ನು ಸೆಪ್ಟೆಂಬರ್‌ 18ರಂದು ಕೇರಳದ ಮಲಪ್ಪುರಂನ ವ್ಯಕ್ತಿಯೊಬ್ಬರಲ್ಲಿಯೂ ಮಂಕಿಪಾಕ್ಸ್‌ ಸೋಂಕು ಕಂಡುಬಂದಿತ್ತು. ದುಬೈಯಿಂದ ಕೇರಳಕ್ಕೆ ಆಗಮಿಸಿದ 38 ವರ್ಷದ ವ್ಯಕ್ತಿಯನ್ನು ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಲಸಿಕೆ ಬಳಸಲು ಅನುಮತಿ

ವಯಸ್ಕರಲ್ಲಿ ಮಂಕಿಪಾಕ್ಸ್‌ಗೆ ಸೋಂಕಿಗೆ ಲಸಿಕೆ ಬಳಸಲು (Mpox Vaccine) ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ತನ್ನ ಅನುಮತಿ ನೀಡಿದೆ. ಇದನ್ನು ಆಫ್ರಿಕಾ ಸೇರಿದಂತೆ ಮಂಕಿಪಾಕ್ಸ್‌ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸೋಂಕಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬವೇರಿಯನ್ ನಾರ್ಡಿಕ್ ಎ/ ಎಸ್ ಉತ್ಪಾದಿಸಿರುವ ಲಸಿಕೆಗೆ ಪೂರ್ವ ಅರ್ಹತೆ ಕೊಡಲಾಗಿದೆ. ಜಿಎವಿಐ- ವ್ಯಾಕ್ಸಿನ್ ಅಲೈಯನ್ಸ್ ಮತ್ತು ಯುನಿಸೆಫ್‌ನಂತ ದಾನಿಗಳು ಅದನ್ನು ಖರೀದಿಸಬಹುದು. ಸದ್ಯಕ್ಕೆ ಏಕೈಕ ಉತ್ಪಾಕರಿರುವ ಕಾರಣ ವ್ಯಾಕ್ಸಿನ್‌ ಸರಬರಾಜು ಸೀಮಿತವಾಗಿದೆ.

ಆಫ್ರಿಕಾ ಖಂಡದಲ್ಲಿ ಹುಟ್ಟಿಕೊಂಡ ಎಂಪಾಕ್ಸ್ ಎಂದೂ ಕರೆಯಲ್ಪಡುವ ಮಂಕಿಪಾಕ್ಸ್‌ ಅನ್ನು ಮೊದಲ ಬಾರಿಗೆ 1970ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (Republic of Congo)ದಲ್ಲಿ ಮಾನವರ ದೇಹದಲ್ಲಿ ಪತ್ತೆ ಹಚ್ಚಲಾಯಿತು. ಸೋಂಕಿತ ವ್ಯಕ್ತಿ, ಕಲುಷಿತ ವಸ್ತುಗಳು ಅಥವಾ ಸೋಂಕಿತ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕದಿಂದ ವೈರಸ್ ಹರಡಬಹುದು. ರೋಗಲಕ್ಷಣಗಳಲ್ಲಿ ಚರ್ಮದ ದದ್ದು, ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು ಸೇರಿವೆ. ಇದು ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತದೆ.

ಈ ಸುದ್ದಿಯನ್ನೂ ಓದಿ: Mpox Virus: ಕೇರಳದಲ್ಲಿ ಮಂಕಿಪಾಕ್ಸ್‌ ಸೋಂಕು ದೃಢ