Saturday, 14th December 2024

ಮುಕೇಶ್‌ ಅಂಬಾನಿ ಕುಟುಂಬದ ಸದಸ್ಯರಿಗೆ ಝಡ್‌ ಪ್ಲಸ್‌ ಸೆಕ್ಯುರಿಟಿ

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಹಾಗೂ ಕುಟುಂಬದ ಸದಸ್ಯರಿಗೆ ದೇಶ ಮತ್ತು ವಿದೇಶಗಳಲ್ಲಿ ಝಡ್‌ ಪ್ಲಸ್‌ ಸೆಕ್ಯುರಿಟಿ ನೀಡಲು ಸುಪ್ರೀಂಕೋರ್ಟ್‌ ಆದೇಶಿಸಿದೆ. ಭದ್ರತೆಯ ವೆಚ್ಚವನ್ನು ಕುಟುಂಬವೇ ಪಾವತಿಸಬೇಕು ಎಂದೂ ತಿಳಿಸಿದೆ.

ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಅಂಶುದ್ದೀನ್‌ ಅಮಾನುಲ್ಲಾ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದೆ.

ಅರ್ಜಿದಾರ ಮುಕೇಶ್‌ ಅಂಬಾನಿ ಮತ್ತು ಕುಟುಂಬ ಹಲವು ಸ್ಥಳಗಳಲ್ಲಿ ವಿವಾದಗಳನ್ನು ಎದುರಿಸುತ್ತಿದೆ. ಜತೆಗೆ ನಾನಾ ಕಡೆಗಳಲ್ಲಿ ಭಾರಿ ಬಿಸಿನೆಸ್‌ ಚಟುವಟಿಕೆಗಳಲ್ಲಿಯೂ ಕುಟುಂಬ ತೊಡಗಿಸಿಕೊಂಡಿದೆ. ಹಲವು ಪ್ರಕರಣಗಳು ನಾನಾ ಹೈಕೋರ್ಟ್‌ಗಳಲ್ಲಿ ಇವೆ. ಆದ್ದರಿಂದ ಭದ್ರತೆಯನ್ನು ಹೆಚ್ಚಿಸ ಬೇಕಾದ ಅನಿವಾರ್ಯತೆ ಇದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಈ ಬಗ್ಗೆ ನಿರ್ದೇಶಿಸಿದೆ.

ಅಂಬಾನಿ ಕುಟುಂಬದ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು, ಅಂಬಾನಿ ಕುಟುಂಬ ಹಲವು ಬೆದರಿಕೆಗಳನ್ನು ಎದುರಿಸುತ್ತಿರುವು ದರಿಂದ ಝಡ್‌ ಪ್ಲಸ್‌ ಸೆಕ್ಯುರಿಟಿ ಒದಗಿಸಿಕೊಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.