ಲೂಧಿಯಾನ: ಲೂಧಿಯಾನಾ ಫಿರೋಜ್ಪುರ ಮಾರ್ಗದ ಮುಲ್ಲಾಪುರ ದಖಾ ಬಳಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ಭಾರಿ ಅಪಘಾತ ತಪ್ಪಿರುವ ಘಟನೆ ನಡೆದಿದೆ.
ರೈಲು ಬಹಳ ಹೊತ್ತು ಟ್ರ್ಯಾಕ್ನಲ್ಲೇ ಇದ್ದ ಕಾರಣ, ಈ ಮಾರ್ಗವಾಗಿ ಸಂಚರಿಸಬೇಕಿದ್ದ ಇತರ ಎಲ್ಲ ರೈಲುಗಳ ಕಾರ್ಯಾಚರಣೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಇತರ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿತ್ತು.
ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರೈಲಿನ ಚಕ್ರಗಳನ್ನು ಮತ್ತೆ ಹಳಿಗೆ ಜೋಡಿಸಿ ದ್ದಾರೆ. ಇದೀಗ ಮತ್ತೆ ಎಂದಿನಂತೆ ಅದೇ ಮಾರ್ಗದಲ್ಲಿ ರೈಲುಗಳು ಸಂಚಾರ ಪ್ರಾರಂಭಿಸಲಿವೆ. ದೀರ್ಘಕಾಲದ ಕಾರ್ಯಾಚರಣೆಯಿಂದಾಗಿ, ಆ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ಹಲವು ರೈಲುಗಳು ತಡವಾಗಿ ಸಂಚರಿಸಿ ದವು. ಹಳಿ ತಪ್ಪಿದ ಗೂಡ್ಸ್ ರೈಲಿನ ಭೋಗಿಗಳನ್ನು ಮರು ಜೋಡಿಸಿ, ಹಳಿಯನ್ನು ಸುಗಮ ಕಾರ್ಯಾಚರಣೆಗೆ ಅಣಿಗೊಳಿಸಿದ ಬಳಿಕ ಆ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ರೈಲುಗಳ ವಿಳಂಬದಿಂದಾಗಿ, ಪ್ರಯಾಣಿಕರು ರೈಲು ಸಿಬ್ಬಂದಿ ಮೇಲೆ ತೀವ್ರವಾಗಿ ಅಸಮಾಧಾನಗೊಂಡಿದ್ದರು. ರಾತ್ರಿಯ ಸಮಯವಾಗಿರುವುದರಿಂದ ಸಿಬ್ಬಂದಿ ರೈಲಿನ ಚಕ್ರಗಳನ್ನು ಹಳಿಗೆ ತರಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು.