Saturday, 14th December 2024

Viral Video: ಇದೆಂಥಾ ದುರ್ವರ್ತನೆ! ಕ್ಷುಲ್ಲಕ ಕಾರಣಕ್ಕೆ ಕ್ಯಾಬ್‌ ಡ್ರೈವರ್‌ನನ್ನೇ ಎತ್ತಿ ನೆಲಕ್ಕೆಸೆದ ಆಡಿ ಕಾರ್‌ ಚಾಲಕ

Viral Video

ಮುಂಬೈ: ಕೆಲವೊಬ್ಬರು ಸಣ್ಣ ಸಣ್ಣ ಕಾರಣಕ್ಕೂ ದುಡ್ಡಿನ ದರ್ಪ ತೋರಿಸುತ್ತಿದ್ದಾರೆ. ಅದರಲ್ಲೂ ಎದುರಿಗಿರುವವನು ಸ್ವಲ್ಪ ಮೃದು ಸ್ವಭಾವದವ ಅಥವಾ ಅಮಾಯಕ ಎಂದು ತಿಳಿದರೆ ಸಾಕು ಅವರ ದರ್ಪ ದುಪ್ಪಟ್ಟಾಗುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ವರದಿಯಾಗಿದೆ. ಆಡಿ ಕಾರಿನ ಚಾಲಕನೋರ್ವ ಕ್ಷುಲ್ಲಕ ಕಾರಣಕ್ಕೆ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ನಡೆಸಿ, ಮೇಲೆ ಎತ್ತಿ ಹಾಕಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಘಾಟ್‌ಕೋಪರ್ ಮೂಲದ ದಂಪತಿಗಳು ತಮ್ಮ ಆಡಿ ಕಾರಿಗೆ ಸಣ್ಣದಾಗಿ ಡಿಕ್ಕಿ ಹೊಡೆದ ಕ್ಯಾಬ್‌ ಚಾಲಕನ ಜೊತೆ ಜಗಳಕ್ಕಿಳಿದಿದ್ದಾರೆ. ಮಾತಿಗೆ ಮುನ್ನವೇ ಆಡಿ ಚಾಲಕ ಕ್ಯಾಬ್‌ ಡ್ರೈವರ್‌ ಖಯಾಮುದ್ದೀನ್‌ ಅನ್ಸರಿಗೆ ಕಪಾಳಮೋಕ್ಷ ನಡೆಸಿದ್ದಾನೆ. ಸಾಲದೆನ್ನುವಂತೆ ಪೈಲ್ವಾನನಂತೆ ಆತನನ್ನು ಮೇಲಕ್ಕೆ ಎತ್ತಿ ನೆಲಕ್ಕೆ ಬಡಿದಿದ್ದಾನೆ. ಈ ದೃಶ್ಯವನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

ಜಗಳದ ನಂತರ ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕ್ಯಾಬ್ ಡ್ರೈವರ್ ಖಯಾಮುದ್ದೀನ್ ಅನ್ಸಾರಿ ತಲೆಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹಲ್ಲೆ ನಡೆಸಿದ ಆಡಿ ಕಾರಿನ ಚಾಲಕನನ್ನು ಪತ್ರಕರ್ತ ರಿಶಭ್‌ ಚಕ್ರವರ್ತಿ ಮತ್ತು ಆತನ ಪತ್ನಿ ಅಂತರಾ ಘೋಷ್‌ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಕೇಸ್‌ ದಾಖಲಾಗಿದೆ. ಕೋರ್ಟ್‌ಗೆ ಹಾಜರಾಗುವಂತೆ ದಂಪತಿ ವಿರುದ್ಧ ನೊಟೀಸ್‌ ಜಾರಿಗೊಳಿಸಲಾಗಿದೆ.

ಘಾಟ್‌ಕೋಪರ್‌ನ ಮಾಲ್‌ನ ಎದುರಿನ ಕಟ್ಟಡದ ಪ್ರವೇಶದ್ವಾರದಲ್ಲಿ ಅನ್ಸಾರಿ ಇದ್ದ ಕ್ಯಾಬ್‌ ಆಡಿ ಕಾರಿನ ಹಿಂದೆ ಬರುತ್ತಿತ್ತು. ಅಚಾನಕ್ಕಾಗಿ ಕಾರು ಸ್ವಲ್ಪ ತಾಗಿತ್ತು. ತಕ್ಷಣ ಕಾರಿನಿಂದ ಇಳಿದು ಬಂದ ದಂಪರಿ ಅನ್ಸಾರಿ ಮೇಲೆ ಹಲ್ಲೆ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://x.com/albert_ce/status/1829568754109337680