Monday, 18th November 2024

Mumbai Robbery: ಗ್ಯಾಸ್‌ ಕಂಪನಿಯ ಉದ್ಯೋಗಿಗಳ ಸೋಗಿನಲ್ಲಿ ಬಂದ ಖದೀಮರು- ಮಹಿಳೆಯ ಕೈ ಕಾಲು ಕಟ್ಟಿ ಮನೆಯಲ್ಲಿದ್ದ 3 ಲಕ್ಷ ರೂ.‌ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್!

Mumbai Crime

ಮುಂಬೈ : ಗ್ಯಾಸ್ ಕಂಪನಿಯೊಂದರ ಉದ್ಯೋಗಿಗಳು ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡು 52 ವರ್ಷದ ಮಹಿಳೆಯೊಬ್ಬರಿಂದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮಹಾರಾಷ್ಟ್ರದ ಘಾ‌ಟ್‌ಕೋಪರ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. (Mumbai Robbery)

ಘಾಟ್‌ಕೋಪರ್ ಪಶ್ಚಿಮದಲ್ಲಿ ನೆಲೆಸಿರುವ ಗೃಹಿಣಿ ಹೇಮಲತಾ ಗಾಂಧಿ ಅವರ ಮನೆಗೆ ವಂಚಕರು ಗ್ಯಾಸ್‌ ಕಂಪನಿಯ ಉದ್ಯೋಗಿಗಳು ಎಂಬ ಸೋಗಿನಲ್ಲಿ ಸಂಜೆ 4:30 ರ ಸುಮಾರಿಗೆ ಬಂದಿದ್ದರು. ಅವರ ಮನೆಯ ಡೋರ್‌ ಬೆಲ್‌ ಮಾಡಿ ಅನಿಲ ಸೋರಿಕೆಯಾಗುತ್ತಿದೆಯೇ ಎಂದು ಪರೀಕ್ಷೆ ಮಾಡಲು ಬಂದಿದ್ದೇವೆ ಎಂದು ಹೇಳಿದ್ದರು.

ಮನೆಯಲ್ಲಿ ಒಬ್ಬರೇ ಇದ್ದ ಹೇಮಲತಾ ಗಾಂಧಿ ಅವರನ್ನು ಮನೆ ಒಳಗೆ ಬಿಟ್ಟುಕೊಂಡಿದ್ದರು. ಒಬ್ಬ ವ್ಯಕ್ತಿ ಅಡುಗೆ ಕೋಣೆಯಲ್ಲಿ ಗ್ಯಾಸ್ ಸಂಪರ್ಕವನ್ನು ಪರಿಶೀಲಿಸುತ್ತಿದ್ದಾಗ ಮತ್ತೊಬ್ಬ ವ್ಯಕ್ತಿ ಒಳಗಿನಿಂದ ಬೀಗ ಹಾಕಿದ್ದಾನೆ. ಹೇಮಲತಾ ಗಾಂಧಿ ಪ್ರಶ್ನೆ ಮಾಡಿದ್ದಕ್ಕೆ ಅವಳ ಕೈಗಳನ್ನು ಕಟ್ಟಿ ಬಾಯಿಗೆ ಬಟ್ಟೆ ತುರುಕಿದ್ದಾರೆ. ನಂತರ ವಿರೋಧಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಮನೆಯಲ್ಲಿದ್ದ ಒಟ್ಟು ಮೌಲ್ಯದ 3 ಲಕ್ಷ ರೂ. ಬೆಲೆಯ ಚಿನ್ನದ ಬಳೆಗಳು, ಮಂಗಳಸೂತ್ರ ಮತ್ತು ಚಿನ್ನದ ಸರವನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ಸುಮಾರು 25-30 ವರ್ಷ ವಯಸ್ಸಿನವರಾಗಿದ್ದು, ಹಿಂದಿ ಮಾತನಾಡುತ್ತಿದ್ದರು ಎಂದು ಹೇಮಲತಾ ಹೇಳಿದ್ದಾರೆ. ಕದ್ದು ಮನೆಯಿಂದ ಪರಾರಿಯಾಗುವ ಸಮಯದಲ್ಲಿ ಹೇಮಲತಾ ಕೂಗಲು ಪ್ರಯತ್ನ ಪಟ್ಟಿದ್ದರು. ಆಕೆಯ ಮುಖ ಹಾಗೂ ಬಲಗಣ್ಣಿಗೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನೆಯ ನಂತರ ಹೇಮಲತಾ ಗಾಂಧಿ ತನ್ನ ಪತಿಗೆ ಮಾಹಿತಿ ನೀಡಿದ್ದು, ದಂಪತಿ ಘಾ‌ಟ್‌ಕೋಪರ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅವರ ದೂರನ್ನು ಆಧರಿಸಿ, ಪೊಲೀಸರು  ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 309 (6) (ದರೋಡೆಕೋರರ ಗುಂಪು) ಮತ್ತು 3 (5) (ಜಂಟಿ ಅಪರಾಧಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಕಡಿಮೆ ಬೆಲೆಗೆ ಫ್ಲ್ಯಾಟ್‌ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ:

ಇತ್ತೀಚೆಗೆ ಪ್ರೀಲಾಂಚ್ ಆಫರ್ ಹೆಸರಲ್ಲಿ ಕಡಿಮೆ ಬೆಲೆಗೆ ವಿಲ್ಲಾ ಮತ್ತು ಫ್ಲ್ಯಾಟ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿ ಸುಮಾರು 60 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಹೈದರಾಬಾದ್​ನ ಜಿಎಸ್‌ಆರ್ ಇನ್ಫ್ರಾ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : Fraud Case: ಮುದುಕರನ್ನು ಯುವಕರನ್ನಾಗಿ ಮಾಡುವ ಆಮಿಷ! 35 ಕೋಟಿ ರೂ. ವಂಚನೆ!

ಮನೆ ನಿರ್ಮಾಣದ ಹೊಸ ಯೋಜನೆ ಆರಂಭಿಸುತ್ತಿದ್ದು, ಇದು ಮೂರು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಪ್ರೀಲಾಂಚ್ ಆಫರ್ ಆಗಿ ಕಡಿಮೆ ಬೆಲೆಗೆ ವಿಲ್ಲಾ ಮತ್ತು ಫ್ಲ್ಯಾಟ್‌ಗಳನ್ನು ನೀಡಲಾಗುತ್ತದೆ ಎಂದ ನಂಬಿಸಿ ಶ್ರೀನಿವಾಸ್‌ ಗ್ರಾಹಕರಿಂದ ಹಣ ಪಡೆದಿದ್ದರು. ಆದರೆ, ಯಾವುದೇ ಕಾಮಗಾರಿಯನ್ನೂ ಆರಂಭಿಸದೆ, ಗ್ರಾಹಕರಿಗೆ ಮರಳಿ ಹಣವನ್ನೂ ನೀಡದೆ ಸತಾಯಿಸುತ್ತಿದ್ದರು ಎಂದು ಸೈಬರಾ​ಬಾದ್​ ಪೊಲೀಸ್​ ಆಯುಕ್ತಾಲಯದ ಆರ್ಥಿಕ ಅಪರಾಧ ದಳದ ಡಿಸಿಪಿ ಕೆ.ಪ್ರಸಾದ್ ತಿಳಿಸಿದ್ದಾರೆ.