Thursday, 12th December 2024

ರಿಕ್ಷಾದ ಮೇಲೆ ಕಬ್ಬಿಣದ ರಾಡ್ ಬಿದ್ದು ಮಹಿಳೆ, ಬಾಲಕಿ ಸಾವು

ಮುಂಬೈ: ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಮೇಲೆ ಕಬ್ಬಿಣದ ರಾಡ್ ಬಿದ್ದು 28 ವರ್ಷದ ಮಹಿಳೆ ಮತ್ತು ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿದ್ದಾರೆ.

ಮೃತರನ್ನು ಶಮಾ ಬಾನೋ ಆಸಿಫ್ ಶೇಖ್ (28) ಮತ್ತು ಅಯತ್ ಆಸಿಫ್ ಶೇಖ್ (9) ಎಂದು ಗುರುತಿಸಲಾಗಿದೆ. ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಶಲ್ಯಕ್ ಆಸ್ಪತ್ರೆ ಬಳಿ ಸಂಜೆ 5.45 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಹಂತದ ಕಟ್ಟಡವು ಸ್ಲಂ ಪುನರ್ವಸತಿ ಪ್ರಾಧಿಕಾರ (ಎಸ್‌ಆರ್‌ಎ) ಯೋಜನೆಯಾಗಿದೆ ಎಂದು ಬೃಹ ನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿ ಹೇಳಿದ್ದಾರೆ.

14 ಅಂತಸ್ತಿನ ಕಟ್ಟಡದ ಸ್ಕ್ಯಾಫೋಲ್ಡಿಂಗ್‌ನ ಏಳನೇ ಮಹಡಿಯಿಂದ ಕಬ್ಬಿಣದ ರಾಡ್ ಬಿದ್ದಿದೆ ಎಂದು ಅವರು ಹೇಳಿದರು. ಕಳೆದ ತಿಂಗಳು ವರ್ಲಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಕುಸಿದು ಬಿದ್ದ ಸಿಮೆಂಟ್ ಬ್ಲಾಕ್‌ನಿಂದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ನಂತರ ಮತ್ತೊಂದು ದುರಂತ ಸಂಭವಿಸಿದೆ.