ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಚಿನ್ನ ಕಳ್ಳಸಾಗಣೆ ದಂಧೆಯನ್ನು ಭೇದಿಸಿದೆ.
ಯುಎಇಯಿಂದ ಮುಂಬೈಗೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಒಟ್ಟು 18 ಮಂದಿ ಸೂಡಾನ್ ಮಹಿಳೆಯರು ಹಾಗೂ ಓರ್ವ ಭಾರತೀಯ ಮಹಿಳೆ ಯನ್ನು ಬಂಧಿಸಿದ್ದಾರೆ. ಬಂಧಿತರಿಂದ ₹ 10.16 ಕೋಟಿ ಮೌಲ್ಯದ ಪೇಸ್ಟ್ ರೂಪದಲ್ಲಿದ್ದ 16.36 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಸಿಂಡಿಕೇಟ್ನ ಭಾಗ ಎಂದು ಶಂಕಿಸಲಾದ ಮಹಿಳಾ ಪ್ರಯಾಣಿಕ ರನ್ನು ಗುರುತಿಸಲಾಗಿದೆ.
ಮಹಿಳೆಯರನ್ನು ಡಿಆರ್ಐ ಪರಿಶೀಲನೆಗೆ ಒಳಪಡಿಸಿದಾಗ ಪೇಸ್ಟ್ ರೂಪ ದಲ್ಲಿ ಚಿನ್ನ, ಚಿನ್ನದ ಕಟ್ ಪೀಸ್ಗಳು ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದೆ. ಇವುಗಳ ಒಟ್ಟಾರೆ ಮೌಲ್ಯ ₹ 10.16 ಕೋಟಿ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ₹ 85 ಲಕ್ಷ ಮೌಲ್ಯದ 1.42 ಕೆಜಿ ಚಿನ್ನಾಭರಣ ಮತ್ತು ₹ 16 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ₹ 88 ಲಕ್ಷ ಮೌಲ್ಯದ ಭಾರತೀಯ ನೋಟುಗಳು ಸಹ ಪತ್ತೆಯಾಗಿವೆ.
ಸೋಮವಾರ ಯುಎಇ ಯಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರ ಸಿಂಡಿಕೇಟ್ನಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂಬ ಗುಪ್ತಚರ ಇಲಾಖೆ ಖಚಿತ ಆಧಾರದ ಮೇಲೆ ಡಿಆರ್ಐ ಅಧಿಕಾರಿಗಳು ನಗರದ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.