Sunday, 15th December 2024

ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವ ಯತ್ನದಲ್ಲಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ

ಮುಂಬೈ: ಮುಂಬೈನ ಮಹಿಳೆಯೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಐಫೋನ್‌ನಿಂದ ಹೊಸ ಆಂಡ್ರಾಯ್ಡ್ ಫೋನ್‌ಗೆ ಬದಲಾಯಿಸಿದ್ದರಿಂದ 7 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾರೆ.

ಮುಂಬೈನ ಪನ್ವೆಲ್‌ನ ಮಹಿಳೆಯೊಬ್ಬರಿಗೆ ಕ್ರೆಡಿಟ್ ಕಾರ್ಡ್ ಮತ್ತು ಉಚಿತ ಆಂಡ್ರಾಯ್ಡ್ ಫೋನ್ ನೀಡುವ ನೆಪದಲ್ಲಿ ಆನ್‌ಲೈನ್ ವಂಚಕರು ಅವರನ್ನ ವಂಚಿಸಿದ್ದಾರೆ. ವರದಿಯ ಪ್ರಕಾರ 40 ವರ್ಷದ ಮಹಿಳೆಗೆ ಸೌರಭ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದ ಬ್ಯಾಂಕ್ ಉದ್ಯೋಗಿ ಕರೆ ಮಾಡಿ ಹೊಸ ಕ್ರೆಡಿಟ್ ಕಾರ್ಡ್ ಮತ್ತು ನಗರದ ಕ್ರೀಡಾ ಕ್ಲಬ್‌ನ ಸದಸ್ಯತ್ವವನ್ನು ನೀಡುವ ಆಫರ್ ಮಾಡಿದ್ದರು.

ಮಹಿಳೆ ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಒಪ್ಪಿಕೊಂಡಿದ್ದರು. ಪ್ರಕ್ರಿಯೆ ಪ್ರಾರಂಭಿಸಲು ವಂಚಕ ನೊಂದಿಗೆ ಮಹಿಳೆ ತನ್ನ ಆಧಾರ್ ಕಾರ್ಡ್ ಸೇರಿದಂತೆ ತನ್ನ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದರು. ಇದಲ್ಲದೆ, ಕ್ರೆಡಿಟ್ ಕಾರ್ಡ್ ಅನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸಿ ಮಾತ್ರ ಸಕ್ರಿಯಗೊಳಿಸಬಹುದು ಎಂದು ಕರೆ ಮಾಡಿದ್ದವರು ಮಹಿಳೆಗೆ ನಂಬಿಸಿದ್ದರು.

ಮಹಿಳೆ ಐಫೋನ್ ಬಳಸುತ್ತಿದ್ದರಿಂದ, ತಾನು ಕಳುಹಿಸುವ ಹೊಸ ಫೋನ್‌ನೊಂದಿಗೆ ಸಾಧನವನ್ನು ಬದಲಾಯಿಸುವಂತೆ ಕೇಳಿದ್ದಾನೆ. ಮಹಿಳೆ ಹೊಸ ಫೋನ್ ಬಳಸಲು ಒಪ್ಪಿಕೊಂಡು ಫೋನ್ ಪಡೆಯಲು ತಮ್ಮ ಮನೆಯ ವಿಳಾಸ ಹಂಚಿಕೊಂಡಿದ್ದರು.