Wednesday, 23rd October 2024

Munawar Faruqui: ಬಿಷ್ಣೋಯ್‌ ಹಿಟ್‌ಲಿಸ್ಟ್‌ನಲ್ಲಿ ಬಿಗ್‌ ಬಾಸ್‌ ವಿನ್ನರ್‌ ಹೆಸರು; ತಿಂಗಳ ಹಿಂದೆ ಹತ್ಯೆಗೆ ಯತ್ನ- ಯಾರಿಗೆಲ್ಲಾ ಇದೆ ಥ್ರೆಟ್‌?

bishnoi gang

ಮುಂಬೈ: ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌(Lawrence Bishnoi) ಮುಂದಿನ ಟಾರ್ಗೆಟ್‌ ಬಿಗ್‌ಬಾಸ್‌ 17 ಸೀಸನ್‌ ವಿನ್ನರ್‌, ಸ್ಟ್ಯಾಂಡ್‌ ಅಪ್‌ ಕಾಮೆಡಿಯನ್‌ ಮುನಾವರ್‌ ಫಾರೂಖಿ(Munawar Faruqui) ಎಂಬ ಸಂಗತಿ ಬಯಲಾಗಿದೆ. ಅಲ್ಲದೇ ಕಳೆದ ತಿಂಗಳು ಈ ಗ್ಯಾಂಗ್‌ ದೆಹಲಿಯ ಹೊಟೇಲ್‌ವೊಂದರಲ್ಲಿ ಫಾರೂಖಿ ಹತ್ಯೆಗೆ ಯತ್ನ ನಡೆಸಿತ್ತು ಎನ್ನಲಾಗಿದೆ.

ಘಟನೆಯ ನಂತರ ಮುಂಬೈ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮುನಾವರ್‌ ಫಾರೂಖಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಕಾರ್ಯಕ್ರಮವೊಂದಕ್ಕೆ ದೆಹಲಿಗೆ ಬಂದಿದ್ದ ಮುನಾವರ್‌ ಅವರು ತಂಗಿದ್ದ ಅದೇ ಹೋಟೆಲ್‌ನಲ್ಲಿ ಗ್ಯಾಂಗ್‌ನ ಸದಸ್ಯರು ರೂಂ ಬುಕ್‌ ಮಾಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಬೆದರಿಕೆ ಒಡ್ಡಲಾಗಿದೆ ಪೊಲೀಸರು ತಿಳಿಸಿದ್ದಾರೆ. ಬಿಗ್‌ ಬಾಸ್‌ ಶೋ ನಂತರ ಮುನಾವರ್‌ ಫಾರೂಖಿ ಸಲ್ಮಾನ್‌ ಖಾನ್‌ ಜತೆ ಉತ್ತಮ ಬಾಂದವ್ಯ ಹೊಂದಿದ್ದರು. ಇದೇ ಕಾರಣಕ್ಕೆ ಅವರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎನ್ನಲಾಗಿದೆ.

ಬಿಷ್ಣೋಯ್ ಹಿಟ್‌ಲಿಸ್ಟ್‌ನಲ್ಲಿರುವವರು ಯಾರು?

ಸಲ್ಮಾನ್ ಖಾನ್: ಬಿಷ್ಣೋಯ್ ಗ್ಯಾಂಗ್‌ ಟಾರ್ಗೆಟ್‌ ಮಾಡಿರುವ ಸೆಲೆಬ್ರಿಟಿಗಳಲ್ಲಿ ಸಲ್ಮಾನ್‌ ಖಾನ್‌ ಪ್ರಮುಖರು. ಬಿಷ್ನೋಯ್‌ ಸಮುದಾಯ ಪೂಜ್ಯನೀಯ ಎಂದು ಭಾವಿಸುವ ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ಪ್ರಮುಖ ಆರೋಪಿ ಆಗಿರುವುದೇ ಅವರ ಮೇಲಿನ ದ್ವೇಷಕ್ಕೆ ಕಾರಣ.

ಜೀಶಾನ್ ಸಿದ್ದಿಕಿ: ಶಾಸಕ ಹಾಗೂ ಶನಿವಾರ ಹತ್ಯೆಗೀಡಾದ ಬಾಬಾ ಸಿದ್ದಿಕ್ ಅವರ ಪುತ್ರ ಜೀಶಾನ್ ಸಿದ್ದಿಕ್ ಬಿಷ್ಣೋಯ್‌ ಗ್ಯಾಂಗ್‌ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಮೊನ್ನೆ ನಡೆದ ಶೂಟಿಂಗ್‌ನಲ್ಲಿ ಜೀಶಾನ್‌ ಅದೃಷ್ಟವಶಾತ್‌ ಪಾರಾಗಿದ್ದಾರೆ ಎನ್ನಲಾಗಿದೆ. ಬಾಬಾ ಸಿದ್ದಿಕಿ ಹತ್ಯೆ ಬಳಿಕ, ಸಲ್ಮಾನ್‌ ಖಾನ್ ಮತ್ತು ದಾವೂದ್‌ ಗ್ಯಾಂಗ್‌ಗೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಇದೇ ಗತಿ ಎಂದು ಬಿಷ್ನೋಯ್‌ ಗ್ಯಾಂಗ್‌ ಎಚ್ಚರಿಕೆ ನೀಡಿದೆ.

ಶಗನ್‌ಪ್ರೀತ್ ಸಿಂಗ್: ಬಿಷ್ಣೋಯ್‌ ಗ್ಯಾಂಗ್‌ನಿಂದ ಹತ್ಯೆಗೀಡಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮ್ಯಾನೇಜರ್ ಶಗನ್‌ಪ್ರಿತ್‌ ಸಿಂಗ್‌ ಕೂಡ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಏಕೆಂದರೆ ಶಗನ್‌ಪ್ರೀತ್ ಆಗಸ್ಟ್ 2021 ರಲ್ಲಿ ಮೊಹಾಲಿಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಅವರ ನಿಕಟ ಸಹವರ್ತಿ ವಿಕ್ಕಿ ಮಿದ್ದುಖೇರಾ ಅವರ ಹಂತಕರಿಗೆ ಆಶ್ರಯ ನೀಡಿದ್ದಾರೆ ಎಂದು ಬಿಷ್ಣೋಯ್ ಆರೋಪ ಆಗಿದೆ.

ಕೌಶಲ್ ಚೌಧರಿ: ಕುಖ್ಯಾತ ಬಾಂಬಿಹಾ ಗ್ಯಾಂಗ್‌ನ ಸದಸ್ಯ ಮತ್ತು ಬಿಷ್ಣೋಯಿ ಅವರ ಪ್ರತಿಸ್ಪರ್ಧಿ, ಚೌಧರಿ ಅವರು ಮಿದ್ದುಖೇರಾದ ಹಂತಕರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದಾರೆ ಎಂಬ ಆರೋಪವನ್ನು ಹೊಂದಿದ್ದರು, ಹೀಗಾಗಿ ಅವರನ್ನು ಬಿಷ್ಣೋಯ್‌ನ ಹಿಟ್‌ಲಿಸ್ಟ್‌ನಲ್ಲಿ ಇರಿಸಿದೆ.

ಅಮಿತ್ ದಾಗರ್: ಕೌಶಲ್ ಚೌಧರಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಡಾಗರ್ ಮಿದ್ದುಖೇರಾ ಹತ್ಯೆಯಲ್ಲಿ ಭಾಗಿಯಾಗಿದ್ದನು, ಅವನನ್ನು ಬಿಷ್ಣೋಯ್‌ ಟಾರ್ಗೆಟ್‌ ಮಾಡಿದೆ.

ಈ ಸುದ್ದಿಯನ್ನೂ ಓದಿ: Baba Siddiqui: ಬಾಬಾ ಸಿದ್ದಿಕಿ ಹಂತಕನಿಂದ ಸೋಶಿಯಲ್‌ ಮೀಡಿಯಾದಲ್ಲಿ KGF ಸಿನಿಮಾ ಡೈಲಾಗ್‌, BGM ಜತೆ ಎಚ್ಚರಿಕೆಯ ಪೋಸ್ಟ್‌