Monday, 18th November 2024

Murder Case: ಕ್ಷುದ್ರ ವಿದ್ಯೆಗಾಗಿ ಒಂದು ವರ್ಷದ ಮಗಳನ್ನೇ ಬಲಿಕೊಟ್ಟು ಕರುಳು ತಿಂದ ತಾಯಿ!

Murder Case

ದೇಶ ಪ್ರಗತಿ ಹೊಂದುತ್ತಿದ್ದರೂ ಕೆಲವು ಕಡೆ ಮೂಢನಂಬಿಕೆ ಮಾತ್ರ ಇನ್ನೂ ಹೋಗಿಲ್ಲ! ಇತ್ತೀಚೆಗೆ ಜಾರ್ಖಂಡ್‍ನ ಪಲಮು ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳನ್ನು ಬಲಿಕೊಟ್ಟು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಅವಳ ಕರುಳನ್ನು ತಾನೇ ತಿಂದಿದ್ದಾಳೆ. ತಾನು ಹೆತ್ತ ಕಂದಮ್ಮನನ್ನು ಈ ರೀತಿ ಕ್ರೂರವಾಗಿ ಹತ್ಯೆ(Murder Case) ಮಾಡಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್‍ನ ಪಲಮು ಜಿಲ್ಲೆಯ ನಿವಾಸಿ ಗೀತಾ ದೇವಿ ತನ್ನ ಸ್ವಂತ ಮಗಳನ್ನು ಶೂದ್ರ ದೇವಿಗೆ ನರಬಲಿ ಕೊಡುವ ಉದ್ದೇಶದಿಂದ ಬಲಿಕೊಟ್ಟು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಮಗುವಿನ ಕರುಳನ್ನು ತಿಂದಿದ್ದಾಳೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ  ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಕಸ್ಟಡಿಯಲ್ಲಿರುವ ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಹುಸೈನಾಬಾದ್ ಠಾಣೆ ಪ್ರದೇಶದ ಖರದ್ ಗ್ರಾಮದಲ್ಲಿ ಈ ಕ್ರೂರ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಆರೋಪಿ ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ನಾನು ಮೊದಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದೆ. ಅಲ್ಲಿಂದ ‘ಪೂಜೆ’ಗೆ ಅಗತ್ಯವಾದ ಬಳೆಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಖರೀದಿಸಿದ್ದೆ. ಮಾಟ ಮಂತ್ರ ಮಾಡಲು ಹೀಗೆ ಮಾಡಿದ್ದೆ ಎಂದು ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಆ ಸಂಜೆ, ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಸಿಕ್‍ನ ಬರ್ವಧೋರಾ ಕಾಡಿಗೆ ಒಂದೂವರೆ ವರ್ಷದ ಮಗಳನ್ನು ಕರೆದುಕೊಂಡು ಹೋಗಿದ್ದೆ ಎಂದು ಆಕೆ ತಿಳಿಸಿದ್ದಾಳೆ.

ಪೊಲೀಸರ ಪ್ರಕಾರ, ಮಹಿಳೆ ತನ್ನ ಮತ್ತು ಮಗಳ ಬಟ್ಟೆಗಳನ್ನು ತೆಗೆದು ‘ಪೂಜೆ’ ಮಾಡಿ ನಂತರ ನಗ್ನ ಸ್ಥಿತಿಯಲ್ಲಿ ಸ್ವಲ್ಪ ಸಮಯದವರೆಗೆ ನೃತ್ಯ ಮಾಡಿದ್ದಾಳೆ. ಇದಾದ ಬಳಿಕ ಮಹಿಳೆ ತನ್ನ ಪುಟ್ಟ ಮಗಳನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ನಂತರ ಅದೇ ಚಾಕುವನ್ನು ಬಳಸಿ ಮಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ನಂತರ ಕುಳಿತು ತನ್ನ ‘ಬಲಿಯಾದ’ ಮಗಳ ಕರುಳು ತಿಂದಿದ್ದಾಳೆ.

ನಂತರ ಆರೋಪಿ ತನ್ನ ಮಗಳನ್ನು ನೆಲದಲ್ಲಿ ಹೂತುಹಾಕಿ ನಗ್ನ ಸ್ಥಿತಿಯಲ್ಲಿ ಮನೆಗೆ ಮರಳಿದ್ದಳಂತೆ. ಅವಳನ್ನು ಆ ಸ್ಥಿತಿಯಲ್ಲಿ ನೋಡಿದ ಸುತ್ತಮುತ್ತಲಿನ ಜನ ಅವಳ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಮಹಿಳೆಯ ಪತಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಟಿವಿ ರಿಪೋರ್ಟರ್‌ ಮೇಲೆ ಅಟ್ಯಾಕ್‌; ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದ ಬಡಪಾಯಿ- ವಿಡಿಯೊ ವೈರಲ್

ನಂತರ ಮಹಿಳೆಯನ್ನು ಬಂಧಿಸಿ ಅಪರಾಧದ ನಡೆದ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ  ಪೊಲೀಸರು ಮಗುವಿನ ವಿರೂಪಗೊಂಡ ದೇಹವು ನಗ್ನ ಸ್ಥಿತಿಯಲ್ಲಿ ಹೂಳಲ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಅವಳು ಮಾಟಮಂತ್ರ – ವಾಮಾಚಾರವನ್ನು ಕಲಿತಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಮಗಳು ಅಥವಾ ಗಂಡನನ್ನು ತ್ಯಾಗ ಮಾಡಿದರೆ ಮಂತ್ರವಿದ್ಯೆಯಲ್ಲಿ ಸಾಧನೆ ಮಾಡಬಹುದು ಎಂದು ಆಕೆಗೆ ಕನಸು ಬಿದ್ದಿತಂತೆ. ಈ ಕಾರಣ ಆಕೆ ತನ್ನ ಹೆತ್ತ ಮಗಳನ್ನೇ ಬಲಿ ಕೊಟ್ಟಳಂತೆ.