Sunday, 15th December 2024

ಮುಸ್ಲಿಂ ಮಹಿಳೆಯರು ವಿಚ್ಛೇದನ ನೀಡಲು ಖುಲಾ ಹಕ್ಕನ್ನು ಚಲಾಯಿಸಬೇಕು

ಚೆನ್ನೈ: ಮುಸ್ಲಿಂ ಮಹಿಳೆಯರು ಗಂಡಂದಿರಿಗೆ ವಿವಾಹ ವಿಚ್ಛೇದನ ನೀಡಲು ಅನುವು ಕಲ್ಪಿಸಲು ಖುಲಾ ಹಕ್ಕನ್ನು ಕೌಟುಂಬಿಕ ನ್ಯಾಯಾಲಯಗಳ ಮೂಲಕ ಚಲಾಯಿಸಬೇಕು.

ಶರಿಯಾ, ಜಮಾತ್ ನಂತಹ ಖಾಸಗಿ ಸಂಘ ಸಂಸ್ಥೆಗಳ ಮೂಲಕವಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 2017ರಲ್ಲಿ ಶರಿಯತ್ ಕೌನ್ಸಿಲ್ನಿಂದ ತನ್ನ ಪತ್ನಿ ಪಡೆದಿರುವ ಖುಲಾ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಸಿ. ಶಿವರಾಮನ್ ಅವರ ನೇತೃತ್ವದ ಪೀಠವು ಈ ಆದೇಶ ನೀಡಿದೆ. ಮುಸ್ಲಿಂ ಪುರುಷರು ಪತ್ನಿಯರಿಗೆ ತಲಾಖ್ ನೀಡುವ ರೀತಿ ಮಹಿಳೆಯರಿಗೂ ಗಂಡಂದಿರಿಗೆ ವಿಚ್ಛೇದನ ನೀಡುವ ಹಕ್ಕಿದೆ.

ಇದಕ್ಕೆ ಖುಲಾ ಎಂದು ಹೇಳಲಾಗುತ್ತದೆ. ಸ್ವಯಂಘೋಷಿತ ಕೋರ್ಟ್ ಆದ ಶರಿಯಾ ಸಂಸ್ಥೆಯೊಂದು ಮಹಿಳೆಯೊಬ್ಬರಿಗೆ 2017ರಲ್ಲಿ ಖುಲಾ ಸರ್ಟಿಫಿಕೇಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಆಕೆಯ ಗಂಡ ಹೈಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ಖುಲಾ ವಿಚ್ಛೇದನ ನೀಡುವ ಅಧಿಕಾರ ಖಾಸಗಿ ಕೋರ್ಟ್ ಗಳಿಗಿಲ್ಲ.

ಮುಸ್ಲಿಂ ವೈಯಕ್ತಿಕ ಕಾನೂನು-1937ರ ಪ್ರಕಾರ ಕೇವಲ ಸರ್ಕಾರಿ ಕೌಟುಂಬಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ ಎಂದು ಹೇಳಿದೆ.