ಅಮರಾವತಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಸೀಮಾಸುಂಕ, ಪರೋಕ್ಷ ತೆರಿಗೆ ಮತ್ತು ಮಾದಕ ವಸ್ತು ರಾಷ್ಟ್ರೀಯ ಅಕಾಡೆಮಿ (ಎನ್‌ಎಸಿಐಎನ್) ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಆಂಧ್ರಪ್ರದೇಶದ ಗವರ್ನರ್ ಎಸ್.ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸೇರಿದಂತೆ ಇತರೆ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮೋದಿ ಅವರು ಮಧ್ಯಾಹ್ನ ಪಾಲಸಮುದ್ರಕ್ಕೆ ಆಗಮಿಸಲಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಎನ್‌ಎಸಿಐಎನ್‌ಗೆ ಮಾನ್ಯತೆ ಪ್ರಮಾಣಪತ್ರವನ್ನು ನೀಡಲಿರುವ ಮೋದಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿವಿಧ ವಿಭಾಗ ಗಳಿಗೆ ಭೇಟಿ ನೀಡುವ ಮೂಲಕ ಅಧಿಕಾರಿಗಳು ಮತ್ತು ಕಟ್ಟಡ ಕಾರ್ಮಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಎನ್‌ಎಸಿಐಎನ್ ಭಾರತ ಸರ್ಕಾರದ ಅತ್ಯುನ್ನತ ಸಂಸ್ಥೆಯಾಗಿದ್ದು, ಪರೋಕ್ಷ ತೆರಿಗೆಗಳ ಕ್ಷೇತ್ರದಲ್ಲಿ ಮುಖ್ಯ ಪಾತ್ರವಹಿಸಿದೆ. ವಿವಿಧ ದೇಶಗಳ ಅಧಿಕಾರಿ ಗಳಿಗೆ ಸೀಮಾಸುಂಕ (ಕಸ್ಟಮ್ಸ್), ಮಾದಕ ವಸ್ತುಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ತರಬೇತಿ ನೀಡುತ್ತದೆ.
ಮಂಗಳವಾರ ಸಂಜೆ ವೇಳೆಗೆ ಮೋದಿ ಅವರು ಪ್ರಸಿದ್ಧ ಲೇಪಾಕ್ಷಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.